ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯಿತು. ಕುಮಾರಧಾರಾ ಹಾಗೂ ಆದಿಸುಬ್ರಹ್ಮಣ್ಯದ ದರ್ಪಣತೀರ್ಥ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಆದಿಸುಬ್ರಹ್ಮಣ್ಯ ದೇವಸ್ಥಾನದ ಆವರಣದ ಮೆಟ್ಟಿಲಿನವರೆಗೂ ನೀರು ಬಂದಿತ್ತು.
ಸುಬ್ರಹ್ಮಣ್ಯದ ದೇವರಗದ್ದೆ ರಸ್ತೆಯಲ್ಲಿ ಮಳೆ ನೀರು ಹರಿದು ಪಾದಚಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸಿದರು. ಬಿಸಿಲೆಘಾಟ್ ಮಾರ್ಗದಲ್ಲಿ ಗಾಳಿ-ಮಳೆಗೆ ಮರಗಳು ಬಿದ್ದು ವಾಹನಗಳಲ್ಲಿದ್ದ ಪ್ರವಾಸಿಗರು ದಾರಿ ಮಧ್ಯೆ ಸಿಲುಕಿದ್ದರು. ಏನೆಕಲ್ಲಿನ ಬೂದಿಪಲ್ಲ-ಮಧುವನ-ದೇವರಹಳ್ಳಿ ರಸ್ತೆಯ ಮಧ್ಯೆ ಭೂಕುಸಿತ ಉಂಟಾಗಿ, ಸಂಪರ್ಕ ಕಡಿತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ, 24 ಗಂಟೆಗಳ ಅವಧಿಯಲ್ಲಿ ಸರಾಸರಿ 4.8 ಸೆಂ.ಮೀ. ಮಳೆಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಮಂಗಳವಾರ ನಸುಕಿನಲ್ಲಿ ಗುಡುಗು, ಸಿಡಿಲು, ಮಿಂಚಿನೊಂದಿಗೆ ಭಾರಿ ಮಳೆ ಸುರಿ ಯಿತು. ಕೆಲವೇ ತಾಸುಗಳಲ್ಲಿ ನದಿಗಳು ಉಕ್ಕಿ ಹರಿಯಲಾರಂಭಿಸಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಸಂಪೂರ್ಣ ಜಲಾವೃತಗೊಂಡಿದೆ. ದಡದಲ್ಲಿರುವ ಉದ್ಯಾನ ಮತ್ತು ಸುತ್ತಮುತ್ತಲಿನ ಗದ್ದೆಗಳಿಗೆ ನದಿ ನೀರು ನುಗ್ಗಿದೆ.
ಮಡಿಕೇರಿ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯ ಹಿಂಬದಿಯ ತಡೆಗೋಡೆ ಕುಸಿದಿದೆ. ಈ ವೇಳೆ ಸ್ಥಳದಲ್ಲಿದ್ದ ಪೌರಕಾರ್ಮಿಕರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಇದರಿಂದ ಕೆಲಕಾಲ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
ನಗರದ ಕೆಲವು ಬಡಾವಣೆಗಳಲ್ಲಿ ಹಾಗೂ ಜೇಡಿಗುಂಡಿ ಎಂಬಲ್ಲಿ ಎತ್ತರದ ಪ್ರದೇಶದಿಂದ ಮಣ್ಣು ಕುಸಿದಿದೆ. ಚಾಮುಂಡೇಶ್ವರಿ ನಗರದಲ್ಲಿ ನೀರಿನ ಪೈಪ್ ಒಡೆದು ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಈ ವೇಳೆ ಮಹಿಳೆಯೊಬ್ಬರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಬಿರುನಾಣಿಯಲ್ಲಿ 11 ಸೆಂ.ಮೀ, ಮಡಿಕೇರಿ, ಪೆರಾಜೆ, ಭಾಗಮಂಡಲ ಮತ್ತು ಸಂಪಾಜೆಯಲ್ಲಿ 10 ಸೆಂ.ಮೀ, ಶಾಂತಳ್ಳಿ 5 ಸೆಂ.ಮೀ, ಹುದಿಕೇರಿಯಲ್ಲಿ 4 ಸೆಂ.ಮೀನಷ್ಟು ಮಳೆ ಸುರಿದಿದೆ.


















