ಸಮಗ್ರ ನ್ಯೂಸ್: ವ್ಯಾಪಾರಿಗಳಿಗೆ ಮಾಡುವ ದೊಡ್ಡ ಮೊತ್ತದ ವಹಿವಾಟುಗಳಿಗೆ ಮಾತ್ರ ಅನ್ವಯವಾಗುವಂತೆ ಶೇಕಡಾ 0.4 ರಷ್ಟು ಅತ್ಯಲ್ಪ ವ್ಯಾಪಾರಿ ರಿಯಾಯಿತಿ ದರವನ್ನು (MDR) ಒಳಗೊಂಡ ನೂತನ ಪಾವತಿ ನೀತಿಯನ್ನು ಮಂಗಳವಾರ ಪ್ರಕಟಿಸಿದೆ.
ಜನಸಾಮಾನ್ಯರ ದೈನಂದಿನ ಡಿಜಿಟಲ್ ವಹಿವಾಟುಗಳಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳದಂತೆ ನೋಡಿಕೊಳ್ಳುವುದು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯ ಸುಸ್ಥಿರತೆಯನ್ನು ಕಾಪಾಡುವುದು ಸರ್ಕಾರದ ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ.
ನೂತನ ನಿಯಮಾವಳಿಗಳ ಅನ್ವಯ, ವ್ಯಕ್ತಿಯಿಂದ ವ್ಯಕ್ತಿಗೆ (P2P – Person to Person) ನಡೆಯುವ ಹಣ ವರ್ಗಾವಣೆಯನ್ನು ಎಂಡಿಆರ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಅಂದರೆ, ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ ಅಥವಾ ಪರಿಚಿತರಿಗೆ ಯಾವುದೇ ಮೊತ್ತದ ಹಣವನ್ನು ಯುಪಿಐ ಮೂಲಕ ಕಳುಹಿಸಿದರೂ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡಲಾಗುವುದಿಲ್ಲ.
ಗ್ರಾಹಕರು ವ್ಯಾಪಾರಿಗಳಿಗೆ ಪಾವತಿಸುವ (Person-to-Merchant) ವಹಿವಾಟುಗಳಲ್ಲಿ ₹2,000 ಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳ ಮೇಲೆ ಶೇಕಡಾ 0.4 ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗಲಿದೆ. ಆದರೆ ಸಣ್ಣ ಮೊತ್ತದ ದಿನನಿತ್ಯದ ಖರೀದಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಹೆಚ್ಚಿನ ಮೌಲ್ಯದ ವಾಣಿಜ್ಯ ವಹಿವಾಟುಗಳಲ್ಲಿ ಶುಲ್ಕದ ಹೊರೆ ಮಿತಿಮೀರಿ ಹೆಚ್ಚಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ₹75,000 ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ಪಾವತಿಗಳಿಗೆ ವಿಧಿಸಲಾಗುವ ಎಂಡಿಆರ್ ಶುಲ್ಕಕ್ಕೆ ಗರಿಷ್ಠ ₹300 ಮಿತಿಯನ್ನು (ಕ್ಯಾಪಿಂಗ್) ನಿಗದಿಪಡಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಪಾವತಿಗಳಲ್ಲೂ ಶುಲ್ಕವು ₹300 ಮೀರುವುದಿಲ್ಲ ಎಂದು ಕೇಂದ್ರ ಸರ್ಕಾರದ ನೂತನ ಮಾರ್ಗಸೂಚಿ ತಿಳಿಸಿದೆ.










