ಮಳೆ, ಪ್ರವಾಹಕ್ಕೆ ತತ್ತರಿಸಿದ ದೇವರನಾಡು| ಕೇರಳಂನಲ್ಲಿ 15 ಮಂದಿ ಸಾವು, 7 ಜನ ನಾಪತ್ತೆ

ಸಮಗ್ರ ನ್ಯೂಸ್: ದೇವರನಾಡು ಕೇರಳಂನಲ್ಲಿ ಭಾರಿ ಮಳೆಯಿಂದ ಸಾಲು ಸಾಲು ಅನಾಹುತಗಳು ಸಂಭವಿಸಿದ್ದು, ಭೀಕರ ಪ್ರವಾಹ, ಭೂಕುಸಿತದ ಹೊಡೆತಕ್ಕೆ ಈವರೆಗೆ 15 ಜನರು ಸಾವನ್ನಪ್ಪಿದ್ದಾರೆ. ಮಳೆ ಅನಾಹುತದಲ್ಲಿ 15 ಜನರು ಮೃತಪಟ್ಟಿದ್ದು, 7 ಜನರು ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ವಿ.ಡಿ.ಸತೀಶನ್ ತಿಳಿಸಿದ್ದಾರೆ.

Ad Widget ... .. Ad Widget .

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸತೀಶನ್, ರಾಜ್ಯ ಸರ್ಕಾರವು ರಾಜ್ಯಾದ್ಯಂತ 316 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಇದುವರೆಗೂ 11,018 ಜನರಿಗೆ ಆಶ್ರಯ ನೀಡಲಾಗಿದೆ ಎಂದು ತಿಳಿಸಿದರು.

Ad Widget

ಮಳೆ ಅಬ್ಬರ, ಪ್ರವಾಹ ಸ್ಥಿತಿಯಿಂದಾಗಿ ಕೊಟ್ಟಾಯಂ ಜಿಲ್ಲೆಯಲಿ 3 ಜನ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಸಣ್ಣ ಮಗುವೂ ಸೇರಿದೆ. ಕೊಟ್ಟಾಯಂನಲ್ಲಿ ಮೃತಪಟ್ಟ ಮೂವರಲ್ಲಿ ಇಬ್ಬರು ಪೂಂಜಾರ್ ಶಾಸನಸಭಾ ಕ್ಷೇತ್ರದವರಾಗಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಮಳೆಯಿಂದಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಎರ್ನಾಕುಲಂನಲ್ಲಿ ಇಬ್ಬರು ಮೃತಪಟ್ಟಿದ್ದರೆ, ಇಡುಕ್ಕಿ ಮತ್ತು ಮೂವಾಟ್ಟುಪುಳ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕೊಲ್ಲಂನಲ್ಲಿ 2, ಮಲಪ್ಪುರಂನಲ್ಲಿ 4 ಮತ್ತು ಕಣ್ಣೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕೋಝಿಕ್ಕೋಡ್‌ನಿಂದಲೂ ಒಂದು ಸಾವು ವರದಿಯಾಗಿದೆ. ಈವರೆಗೆ ಒಟ್ಟು 15 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

7 ಜನರು ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ 7 ಜನರ ಪೈಕಿ ಇಬ್ಬರು ಕೊಲ್ಲಂ, ಇಬ್ಬರು ಕಣ್ಣೂರು ಮತ್ತು ಒಬ್ಬರು ಮಲಪ್ಪುರಂ ಜಿಲ್ಲೆಯವರಾಗಿದ್ದಾರೆ. ಇದಲ್ಲದೆ ಇಡುಕ್ಕಿ ಮತ್ತು ಮೂವಾಟ್ಟುಪುಳದಿಂದ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯನ್ನು ಬಲಪಡಿಸಲು ಕೊಲ್ಲಂನಿಂದ ಚೆಂಗನ್ನೂರಿನವರೆಗೆ 14 ಮೀನುಗಾರಿಕಾ ದೋಣಿಗಳನ್ನು ನಿಯೋಜಿಸಲಾಗಿದೆ. ತಮಿಳುನಾಡಿನ ಸುಲೂರ್‌ನಿಂದ ಬಂದಿರುವ ಎರಡು ಹೆಲಿಕಾಪ್ಟರ್‌ಗಳನ್ನು ವೈಮಾನಿಕ ಕಾರ್ಯಾಚರಣೆಗಾಗಿ ತಿರುವನಂತಪುರಂನಲ್ಲಿ ಸಜ್ಜಾಗಿಡಲಾಗಿದೆ. ತೀವ್ರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ತಂಡಗಳನ್ನು ನಿಯೋಜಿಸಲಾಗಿದ್ದು, ಅರಕ್ಕೋಣಂನಿಂದ ಹೆಚ್ಚುವರಿ ಪಡೆಯನ್ನು ಕರೆಸಲಾಗುತ್ತಿದೆ. ಪರಿಸ್ಥಿತಿ ಕೈಮೀರಿದರೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮತ್ತು ರಕ್ಷಣಾ ಭದ್ರತಾ ಪಡೆಯನ್ನು (DSC) ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Leave a Comment

Your email address will not be published. Required fields are marked *