ಪುತ್ತೂರು: ನಾಪತ್ತೆಯಾಗಿದ್ದ ‘ಚಿನ್ನು’ ಪತ್ತೆ ಮಾಡಿದಾತನಿಗೆ ₹50 ಸಾವಿರ ಚೆಕ್ ನೀಡಿದ ಮಾಲೀಕ

ಸಮಗ್ರ ನ್ಯೂಸ್: ಸಾಕು ನಾಯಿಗಳೆಂದರೆ ಕೇವಲ ಪ್ರಾಣಿಗಳಲ್ಲ, ಅವು ಮನೆಯ ಒಂದು ಅವಿಭಾಜ್ಯ ಅಂಗ ಎಂಬುದನ್ನು ಪುತ್ತೂರಿನ ಶ್ವಾನಪ್ರೇಮಿಯೊಬ್ಬರು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ನಾಪತ್ತೆಯಾಗಿದ್ದ ತಮ್ಮ ಪ್ರೀತಿಯ ದೇಸಿ ತಳಿಯ ನಾಯಿಯನ್ನು ಹುಡುಕಿಕೊಟ್ಟ ಸ್ಥಳೀಯ ವ್ಯಕ್ತಿಗೆ, ಮಾಲೀಕರು ಕೊಟ್ಟ ಮಾತಿನಂತೆ ₹50 ಸಾವಿರ ನಗದು ಬಹುಮಾನದ ಚೆಕ್ ವಿತರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

Ad Widget ... .. Ad Widget .

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಸಮೀಪದ ಪೋಳ್ಯ ನಿವಾಸಿ, ಪ್ರಸಿದ್ಧ ಶ್ವಾನಪ್ರೇಮಿ ಗಣೇಶ್ ಕೇರ ಅವರ ಮನೆಯ ‘ಚಿನ್ನು’ ಹೆಸರಿನ ದೇಸಿ ತಳಿಯ ನಾಯಿಯೇ ಈ ಭಾರಿ ಬಹುಮಾನಕ್ಕೆ ಕಾರಣವಾದ ಶ್ವಾನ. ಪೋಳ್ಯ ಪರಿಸರದವರೇ ಆದ ಪುರಂದರ ಎಂಬುವವರು ಈ ನಾಯಿಯನ್ನು ಯಶಸ್ವಿಯಾಗಿ ಹುಡುಕಿಕೊಟ್ಟಿದ್ದಾರೆ. ಶ್ವಾನಪ್ರೇಮಿ ಗಣೇಶ್ ಕೇರ ಅವರು ತಮ್ಮ ಮನೆಯಲ್ಲಿ ವಿವಿಧ ತಳಿಗಳ ಸುಮಾರು 30 ನಾಯಿಗಳನ್ನು ಸಾಕಿ ಸಲಹುತ್ತಿದ್ದಾರೆ. ಇವರಲ್ಲಿ ಬಹುತೇಕ ನಾಯಿಗಳು ರಸ್ತೆ ಬದಿಯಲ್ಲಿ ಅಪಘಾತಕ್ಕೀಡಾಗಿ ಅನಾಥವಾಗಿದ್ದವುಗಳಾಗಿವೆ.

Ad Widget

‘ಚಿನ್ನು’ ಕೂಡ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾಗ ಗಣೇಶ್ ಅವರು ಅದನ್ನು ಮನೆಗೆ ತಂದು ಉಪಚರಿಸಿದ್ದರು. ಆದರೆ, ಫಿಟ್ಸ್ (ಮೂರ್ಛೆ ರೋಗ) ಸಮಸ್ಯೆಯಿಂದಾಗಿ ಈ ನಾಯಿ ತನ್ನ ಕಾಲುಗಳ ಸ್ವಾಧೀನ ಕಳೆದುಕೊಂಡಿತ್ತು. ಇಂತಹ ವಿಶೇಷ ಚೇತನ ನಾಯಿ ಮೂರು ವಾರಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ತನ್ನ ಪ್ರೀತಿಯ ಶ್ವಾನ ಕಾಣೆಯಾದ್ದರಿಂದ ಕಂಗಾಲಾಗಿದ್ದ ಗಣೇಶ್ ಕೇರ ಅವರು, ನಗದು ಬಹುಮಾನದ ಭರವಸೆಯೊಂದಿಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಲ್ಲದೆ, ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಿದ್ದರು. ನಾಯಿಯನ್ನು ಪತ್ತೆಹಚ್ಚಿ ಕೊಟ್ಟವರಿಗೆ ₹50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ನಾಪತ್ತೆಯಾಗಿದ್ದ ನಾಯಿ ಗಣೇಶ್ ಅವರ ಮನೆಯ 2 ಕಿಲೋಮೀಟರ್ ಸುತ್ತಮುತ್ತಲಲ್ಲೇ ತಿರುಗಾಡುತ್ತಿತ್ತು. ನಾಪತ್ತೆಯಾದ ಮೂರೇ ದಿನಕ್ಕೆ ಪುರಂದರ ಅವರು ಈ ನಾಯಿಯನ್ನು ಗುರುತಿಸಿ ಗಣೇಶ್ ಅವರಿಗೆ ಮಾಹಿತಿ ನೀಡಿದ್ದರಾದರೂ, ಅಂದು ನಾಯಿ ಕೈಗೆ ಸಿಗದೆ ಓಡಿಹೋಗಿತ್ತು. ಆದರೆ, ಎರಡು ದಿನಗಳ ಹಿಂದೆ ನಾಯಿ ಮತ್ತೆ ಪುರಂದರ ಅವರ ಕಣ್ಣಿಗೆ ಬಿದ್ದಾಗ, ಅವರು ಸಮಯಪ್ರಜ್ಞೆ ಮೆರೆದು ನಾಯಿಯನ್ನು ಅಲ್ಲೇ ಹಿಡಿದು ಸುರಕ್ಷಿತವಾಗಿ ಮಾಲೀಕ ಗಣೇಶ್ ಅವರಿಗೆ ಒಪ್ಪಿಸಿದ್ದಾರೆ. ಕೊಟ್ಟ ಮಾತಿನಂತೆ ಗಣೇಶ್ ಕೇರ ಅವರು ಪುರಂದರ ಪೋಳ್ಯ ಅವರನ್ನು ತಮ್ಮ ಮನೆಗೆ ಗೌರವಪೂರ್ವಕವಾಗಿ ಆಹ್ವಾನಿಸಿ ₹50 ಸಾವಿರ ಮುಖಬೆಲೆಯ ಚೆಕ್ ಹಸ್ತಾಂತರಿಸಿದ್ದಾರೆ. “ನಮ್ಮ ಚಿನ್ನು ಮನೆಗೆ ಮರಳಿದ್ದಾಳೆ, ಅವಳನ್ನು ಸುರಕ್ಷಿತವಾಗಿ ತಲುಪಿಸಿದ ಪುರಂದರ ಅವರಿಗೆ ಧನ್ಯವಾದಗಳು” ಎಂದು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *