ಸಮಗ್ರ ನ್ಯೂಸ್: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಾರುತಗಳ ಚಲನೆ ಚುರುಕುಗೊಂಡಿದ್ದರೂ, ವಾಡಿಕೆಯ ಮಳೆಗಿಂತ ಕೊರತೆಯನ್ನು ಅನುಭವಿಸಲಾಗಿದೆ. ಇದೀಗ ಪಶ್ಚಿಮ ಮಧ್ಯ ಬಂಗಾಳಕೊಲ್ಲಿಯಿಂದ ಕೇರಳದವರೆಗೆ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮವಾಗಿ ಮುಂದಿನ ಕೆಲವು ದಿನಗಳಲ್ಲಿ ರಾಜ್ಯದಾದ್ಯಂತ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆಯಿದೆ. ಜೂನ್ 17ರ ಹವಾಮಾನ ವರದಿಯ ಪ್ರಕಾರ, ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.
ನೈಋತ್ಯ ಮುಂಗಾರು ಮಾರುತಗಳು ಸದ್ಯ ಹರ್ನೈ, ಸೋಲಾಪುರ, ಹೈದರಾಬಾದ್ ಮತ್ತು ಭದ್ರಾಚಲಂ ಮೂಲಕ ಹಾದು ಹೋಗುತ್ತಿವೆ. ಮುಂದಿನ 4-5 ದಿನಗಳಲ್ಲಿ ತೆಲಂಗಾಣ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದ ಕೆಲವು ಭಾಗಗಳಿಗೆ ಮುಂಗಾರು ಮತ್ತಷ್ಟು ವ್ಯಾಪಿಸಲು ಪೂರಕ ವಾತಾವರಣವಿದೆ. ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಿಂದ ಕೇರಳದವರೆಗೆ ವಾಯುಭಾರ ಕುಸಿತ ಕಂಡುಬಂದಿದ್ದು, ಇದು ಮಳೆಗೆ ಪೂರಕವಾಗಿದೆ.
ಒಂದೆಡೆ ಮಳೆಯ ಮುನ್ಸೂಚನೆ ಇದ್ದರೆ, ಮತ್ತೊಂದೆಡೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲ ಧಗೆ ಏರಿಕೆಯಾಗಿದೆ. ವಾಸ್ತವಿಕ ತಾಪಮಾನವು ಸಾಮಾನ್ಯಕ್ಕಿಂತ 5.1 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ದಾಖಲಾಗಿದ್ದು, ಜನರು ಬಿಸಿಲಿನ ತಾಪಕ್ಕೆ ತತ್ತರಿಸಿದ್ದಾರೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲೂ ತಾಪಮಾನದಲ್ಲಿ 3.1 ರಿಂದ 5 ಡಿಗ್ರಿಯಷ್ಟು ಏರಿಕೆ ಕಂಡುಬಂದಿದೆ.
ಮುಂದಿನ ಏಳು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜೂನ್ 20 ರಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.
ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಜೂನ್ 17 ರಿಂದಲೇ ಮಳೆ ಆರಂಭವಾಗಲಿದೆ. ವಿಶೇಷವಾಗಿ ಜೂನ್ 20 ಮತ್ತು 21 ರಂದು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರಾಯಚೂರು, ವಿಜಯಪುರ ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆ ಇದೆ.








