ಪ್ರಕಾಶ್ ರಾಜ್ ಸುದ್ದಿಗೋಷ್ಠಿಯಲ್ಲಿ ಸದ್ದುಮಾಡಿದ ‘ಮಾರಿಕೊಂಡವರು’ ಪದ| ಪತ್ರಕರ್ತರಿಂದ ತೀವ್ರ ತರಾಟೆ

ಸಮಗ್ರ ನ್ಯೂಸ್: ಚಿನ್ನಯ್ಯ ನೀಡಿರುವ ಹೇಳಿಕೆಯ ಬಗ್ಗೆ ನಟ ಪ್ರಕಾಶ್‌ ರಾಜ್‌ ಕರೆದಿದ್ದ ಸುದ್ದಿಗೋಷ್ಠಿಗೆ ಸಾಮಾಜಿಕ ಜಾಲತಾಣದಲ್ಲಿ ಆಹ್ವಾನಿಸುವಾಗ ‘ಮಾರಿಕೊಂಡ ಮಾಧ್ಯಮದವರಿಗೆ ವಿಶೇಷ ಆಹ್ವಾನ’ ಎಂದು ಹೇಳಿರುವುದು ಸುದೀರ್ಘ ವಾಗ್ವಾದಕ್ಕೆ ಕಾರಣವಾಯಿತು.

Ad Widget ... .. Ad Widget .

ಮಾರಿಕೊಂಡವರು ಯಾರು ಎಂಬುದನ್ನು ಹೇಳಬೇಕು. ಇಲ್ಲದೇ ಇದ್ದರೆ ಕ್ಷಮೆ ಕೇಳಬೇಕು ಎಂದು ಮಾಧ್ಯಮದ ಹಲವರು ಪಟ್ಟು ಹಿಡಿದರು. ‘ನಿಮಗಲ್ಲ ಹೇಳಿದ್ದು’ ಮಾರಿಕೊಂಡವರಿಗೆ ಹೇಳಿದ್ದು ಎಂದು ಪ್ರಕಾಶ್‌ ರಾಜ್‌ ಕೂಡ ಕ್ಷಮೆ ಕೇಳಲು ನಿರಾಕರಿಸಿದ್ದರಿಂದ ಸುದ್ದಿಗೋಷ್ಠಿಯಲ್ಲಿ ಒಂದೂವರೆ ತಾಸಿಗೂ ಅಧಿಕ ಸಮಯ ಈ ಚರ್ಚೆಯಲ್ಲೇ ಕಳೆದು ಹೋಯಿತು.

Ad Widget

ಬುಧವಾರ ಸುದ್ದಿಗೋಷ್ಠಿ ಆರಂಭವಾಗುತ್ತಿದ್ದಂತೆ ‘ಮಾರಿಕೊಂಡವರು ಯಾರು’ ಎಂದು ಮಾಧ್ಯಮದವರು ಪ್ರಶ್ನಿಸಿದರು. ‘ಮಾರಿಕೊಂಡವರು ಯಾರು ಎಂಬುದು ನನಗೆ ಗೊತ್ತಿದೆ. ನಾನು ಸುದ್ದಿಗೋಷ್ಠಿಗೆ ನಿಮಗೆ ಅಧಿಕೃತ ಆಹ್ವಾನ ನೀಡಿದ್ದೇನೆ. ಅದರಲ್ಲಿ ಮಾರಿಕೊಂಡವರು ಎಂಬ ಪದ ಬಳಸಿಲ್ಲ. ನನ್ನ ವೈಯಕ್ತಿಕ ಜಾಲತಾಣ ಖಾತೆಯಲ್ಲಿ ಅವರಿಗೂ ಆಹ್ವಾನ ನೀಡಿದ್ದೇನೆ. ಅವರ ಪ್ರಶ್ನೆಗಳಿಗೂ ಉತ್ತರ ನೀಡಬೇಕು ಎಂಬ ಕಾರಣಕ್ಕೆ ಕರೆದಿದ್ದೇನೆ’ ಪ್ರಕಾಶ್‌ರಾಜ್ ಸ್ಪಷ್ಟನೆ ನೀಡಿದರು.

‘ಮಾಧ್ಯಮ ಅಂದರೆ ಎಲ್ಲ ಮಾಧ್ಯಮಗಳು ಬರುತ್ತವೆ. ಇಂಥವರೆಲ್ಲ ಮಾರಿಕೊಂಡುವರು ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು’ ಎಂದು ಒತ್ತಾಯಿಸಿದಾಗ, ‘ಅವರಿಗೂ ಹೆಂಡತಿ ಮಕ್ಕಳಿದ್ದಾರೆ. ಅವರು ಬದುಕಿಕೊಳ್ಳಲಿ ಎಂಬ ಕಾಳಜಿಯಿಂದ ಹೇಳುವುದಿಲ್ಲ. ಭಾರತ ಪತ್ರಿಕೋದ್ಯಮದಲ್ಲಿ ಮಾರಿಕೊಂಡ ಮಾಧ್ಯಮಗಳೂ ಇವೆ. ಮಾರಿಕೊಳ್ಳದವರೂ ಇದ್ದಾರೆ ಎಂಬುದು ಜನರಿಗೆ ಗೊತ್ತು’ ಎಂದು ಪ್ರಕಾಶ್‌ ರಾಜ್‌ ಉತ್ತರಿಸಿದರು.

ಕ್ಷಮೆ ಕೇಳುವಂತೆ ಒತ್ತಾಯಿಸಿದಾಗ, ‘ಕ್ಷಮೆ ಕೇಳಲು ನಾನು ಸಾವರ್ಕರ್‌ ಅಲ್ಲ’ ಎಂದು ಹೇಳಿದ ಅವರು, ‘ನಾನು ಉತ್ತರವನ್ನು ಹೇಳಿಯಾಗಿದೆ. ನೀವು ಬಯಸುವ ಉತ್ತರ ನಾನು ಹೇಳಲು ಸಾಧ್ಯವಿಲ್ಲ. ನಾನು ಏನು ಹೇಳಬೇಕೋ ಅದನ್ನೇ ಹೇಳುತ್ತೇನೆ. ಅದು ಸಮಂಜಸವಲ್ಲ ಎಂದು ನಿಮಗೆ ಅನ್ನಿಸಿದರೆ ಹಾಗೇ ಬರೆದುಬಿಡಿ’ ಎಂದರು.

ತಾಕತ್ತಿದ್ದರೆ, ಮರ್ಯಾದ ಇದ್ದರೆ ಉತ್ತರ ಹೇಳಿ ಅಂದಾಗಲೂ ‘ನಿಮ್ಮ ಯಾವ ಮಾತಿಗೂ ನಾನು ರೊಚ್ಚಿಗೇಳುವುದಿಲ್ಲ. ನೀವು ನನ್ನ ಸಾಮಾಜಿಕ ಜಾಲತಾಣದಲ್ಲಿ ನೀಡಿದ ಆಹ್ವಾನ ನೋಡಿ ಬಂದವರಲ್ಲ. ನಾನು ಅಧಿಕೃತವಾಗಿ ನೀಡಿದ ಆಹ್ವಾನದಿಂದಾಗಿ ಬಂದಿದ್ದೀರಿ. ಮತ್ಯಾಕೆ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದರು.

‘ಕರ್ನಾಟಕದ ಮಾಧ್ಯಮದ ಬಗ್ಗೆ ಅಲ್ಲ, ಕರ್ನಾಟಕದ ಮಾಧ್ಯಮವನ್ನು ಹಾಳು ಮಾಡುತ್ತಿರುವ ಕೆಲವು ಮಾರಿಕೊಂಡವರ ಬಗ್ಗೆ ಅಷ್ಟೇ ಹೇಳಿದ್ದೇನೆ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲು ಪ್ರೆಸ್‌ಮೀಟ್‌ ಕರೆದಿದ್ದೇನೆ. ಪ್ರೆಸ್‌ಮೀಟ್‌ ಕರೆಯದಿರಲು ನಾನು ಪ್ರಧಾನಿ ಅಲ್ಲ’ ಎಂದು ಹೇಳಿದ ಪ್ರಕಾಶ್‌ ರಾಜ್‌ ಕೊನೆಗೂ ‘ಮಾರಿಕೊಂಡವರು ಯಾರು’ ಎಂಬುದನ್ನು ಹೇಳಲಿಲ್ಲ. ದೇವನೂರ ಮಹಾದೇವರ ಅವರ ‘ಮಾರಿಕೊಂಡವರು’ ಕಥೆಯನ್ನು ಓದಿ ಗೊತ್ತಾಗುತ್ತದೆ ಎಂದು ತೇಲಿಸಿದರು. ‘ಮಾರಿಕೊಂಡವರು ಯಾರು ಎಂಬುದು ನಿಮಗೇ ಗೊತ್ತಿದೆ. ಆದರೂ ಕೇಳುತ್ತೀರಿ’ ಸಮಜಾಯಿಷಿ ನೀಡಿದರು. ‘ಕೆಲವು ಪತ್ರಕರ್ತರಿಗೆ ನನ್ನ ಬಗ್ಗೆಯೂ ನಿಜ ಬರೆಯಬೇಕು ಎಂದು ಕಾಳಜಿ ಇದೆ. ಆದರೆ ಮಾಲೀಕರು ಬಿಡುತ್ತಿಲ್ಲ’ ಎಂದು ಹೇಳಿದರು.

Leave a Comment

Your email address will not be published. Required fields are marked *