ಸಮಗ್ರ ನ್ಯೂಸ್: ಶ್ರೀರಾಮನ ಕುರಿತು ನಿರಂತರವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಸಂವರ್ಧನಾ ಸಮಿತಿಯ ನೇತೃತ್ವದಲ್ಲಿ ಈ ಕಾನೂನು ಹೋರಾಟ ಆರಂಭವಾಗಿದೆ.ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೂರು: ಶನಿವಾರ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಮಿತಿಯ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆಯ ಮೂಲಕ ಠಾಣೆಗೆ ಆಗಮಿಸಿದ ನಿಯೋಗವು ಅಧಿಕೃತವಾಗಿ ದೂರು ಸಲ್ಲಿಸಿತು. “ಕಳೆದ ಹಲವು ವರ್ಷಗಳಿಂದ ಕೆ.ಎಸ್. ಭಗವಾನ್ ಅವರು ಉದ್ದೇಶಪೂರ್ವಕವಾಗಿ ಶ್ರೀರಾಮನ ವಿರುದ್ಧ ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಇದು ಅಸಂಖ್ಯಾತ ಭಕ್ತರ ಧಾರ್ಮಿಕ ನಂಬಿಕೆಯನ್ನು ಹೀಯಾಳಿಸುವ ಪ್ರಯತ್ನವಾಗಿದೆ” ಎಂದು ದೂರುದಾರರು ತಿಳಿಸಿದ್ದಾರೆ. ಪೊಲೀಸರ ನಡೆಗೆ ಆಕ್ರೋಶ – ಪ್ರತಿಭಟನೆಯ ಎಚ್ಚರಿಕೆ: ಇದೇ ಸಂದರ್ಭದಲ್ಲಿ ಪೊಲೀಸರ ಕಾರ್ಯವೈಖರಿಯ ಬಗ್ಗೆಯೂ ಸಮಿತಿಯ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಕೇವಲ ಒಂದು ಸಣ್ಣ ಸಂದೇಶ (Message) ಫಾರ್ವರ್ಡ್ ಮಾಡಿದವರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸುವ ಪೊಲೀಸರು, ನಿರಂತರವಾಗಿ ಕೋಮು ಭಾವನೆ ಕೆರಳಿಸುವ ಭಗವಾನ್ ಅವರನ್ನು ಯಾಕೆ ಇನ್ನೂ ಬಂಧಿಸಿಲ್ಲ?” ಎಂದು ಪ್ರಶ್ನಿಸಿದರು. ಒಂದು ವೇಳೆ ಈ ಬಾರಿಯೂ ಪೊಲೀಸರು ಭಗವಾನ್ ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.







