ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ| ಪೈಲಟ್ ನ ಆ ಒಂದು ತಪ್ಪಿನಿಂದ 158 ಮಂದಿ ಚಿರನಿದ್ರೆಗೆ ಜಾರಿದರು!!

ಸಮಗ್ರ ನ್ಯೂಸ್: ಸರಿಯಾಗಿ ಹದಿನಾರು ವರ್ಷಗಳ ಹಿಂದೆ ಇದೇ ದಿನ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 158 ಮಂದಿಯ ಮೃತದೇಹ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು! ದುಬೈನಿಂದ ತಮ್ಮೂರಿಗೆ ಇನ್ನೇನು ಎರಡೇ ನಿಮಿಷಗಳಲ್ಲಿ ಲ್ಯಾಂಡ್‌ ಆಗಿಬಿಡುತ್ತೀವಿ ಎಂದುಕೊಳ್ಳುತ್ತಿದ್ದಂತೆಯೇ ಭೀಕರವಾದ ಘಟನೆ ನಡೆದೇ ಹೋಯಿತು!

Ad Widget ... ..

ಮಂಗಳೂರು ವಿಮಾನ ದುರಂತ ಕಳೆದು ಇಂದಿಗೆ ಹದಿನಾರು ವರುಷಗಳು ಉರುಳಿವೆ. ಇಷ್ಟು ವರ್ಷಗಳಿಂದಲೂ ಈ ಘಟನೆ ನಡೆಯಬಾರದಿತ್ತು, ಒಂದೇ ನಿಮಿಷ ತಡ ಆಗಿದ್ರೆ ಅಥವಾ ಒಂದೇ ನಿಮಿಷ ಬೇಗ ಬಂದಿದ್ರೆ? ಈ ಸಾವು ತಪ್ಪಬಹುದಿತ್ತು ಎಂದು ಮೃತರ ಕುಟುಂಬಗಳು ಕಣ್ಣೀರಿಡುತ್ತಿವೆ.

Ad Widget

ಮಂಗಳೂರು ಏರ್‌ಪೋರ್ಟ್‌ನಲ್ಲಿ ದುಬೈನಿಂದ ಬರುತ್ತಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವೊಂದು ಲ್ಯಾಂಡಿಂಗ್‌ ವೇಳೆ ನಿಯಂತ್ರಣಕ್ಕೆ ಸಿಗದೇ ರನ್‌ವೇ ಇಂದ ಜಾರಿ ಕಣಿವೆಗೆ ಬಿದ್ದಿತ್ತು. ಟೇಬಲ್‌ ಟಾಪ್‌ನಲ್ಲಿರುವ ರನ್‌ವೇಯಿಂದ ಕಣಿವೆಗೆ ಬಿದ್ದ ವಿಮಾನದ ರಭಸ ಹೇಗಿತ್ತೆಂದರೆ, ಇಬ್ಭಾಗವಾಗಿ, ಸ್ಫೋಟಗೊಂಡಿತ್ತು. 166 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ 158 ಮಂದಿ ಸಜೀವ ದಹನವಾಗಿದ್ದರು.

ತಣ್ಣಗೆ ಮನೆಯಲ್ಲಿ ಮಲಗಿದ್ದ ಕರಾವಳಿ ಜನತೆಗೆ ಈ ಸುದ್ದಿ ಸಿಡಿಲಿನಂತೆ ಅಬ್ಬರಿಸಿತ್ತು. ಇದನ್ನು ಕರಾಳ ದಿನ,ಶತ್ರುಗಳಿಗೂ ಹೀಗಾಗದೇ ಇರಲಿ ಎಂದು ಜನ ಕಂಬನಿ ಮಿಡಿದಿದ್ದರು. ಇದು ಕರಾವಳಿಯಲ್ಲಿ ನಡೆದ ಅತ್ಯಂತ ದೊಡ್ಡ ದುರಂತ ಎಂದೇ ಹೇಳಲಾಗುತ್ತದೆ. ಘಟನೆ ಕಳೆದಿರಬಹುದು ಆದರೆ ಅದು ಬಿಟ್ಟುಹೋದ ನೋವು ಮಾತ್ರ ಜನರಲ್ಲಿ ಇಂದಿಗೂ ಇದೆ.

ಈ ಘಟನೆಯಲ್ಲಿ 158 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 19 ಮಕ್ಕಳು, 4 ಕಂದಮ್ಮಗಳು, ವಿಮಾನ ಸಿಬ್ಬಂದಿ ಕೂಡ ಮೃತಪಟ್ಟಿದ್ದಾರೆ. ವಿಮಾನದ ಬ್ಲಾಕ್‌ಬಾಕ್ಸ್‌ನಲ್ಲಿ ದಾಖಲಾದ ಧ್ವನಿ ಮುದ್ರಿಕೆಯ ಅನ್ವಯ ಸಹ ಪೈಲಟ್‌ ಎಚ್ಚರಿಕೆ ನೀಡಿದರೂ ಮುಖ್ಯ ಪೈಲಟ್‌ ಅದನ್ನು ಗಮನಕ್ಕೆ ತೆಗೆದುಕೊಳ್ಳದೇ ವೇಗವಾಗಿ ಆಗಮಿಸಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ. ರನ್‌ವೇಯಲ್ಲಿ ವಿಮಾನ ಲ್ಯಾಂಡ್‌ ಮಾಡದೇ ಇನ್ನೂ ಮುಂದಕ್ಕೆ ಹೋಗಲು ಯತ್ನಿಸಿದ ವೇಳೆ ಈ ರೀತಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಪೈಲಟ್‌ ನಿದ್ದೆಗೆ ಜಾರಿದ್ದರೂ ಎಂದು ಕೆಲ ವರದಿಗಳು ಹೇಳಿವೆ.

ಈ ದುರಂತದಲ್ಲಿ ಮಡಿದವರ ಸ್ಮರಣಾರ್ಥವಾಗಿ ಕೂಳೂರಿನ ತಣ್ಣೀರುಬಾವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಮಾರಕವೊಂದನ್ನು ನಿರ್ಮಿಸಿದೆ. ಇಂದಿಗೂ ಇದರ ಬಳಿ ಹಾದುಹೋದಾಗ ಜನರ ಕಣ್ಣಂಚಿನಲ್ಲಿ ಹನಿ ನೀರು ಜಿನುಗುತ್ತದೆ.

Leave a Comment

Your email address will not be published. Required fields are marked *