ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಆಡಳಿತ ಮಂಡಳಿಯು ವಿಶೇಷ ನಿಯಮ ರೂಪಿಸಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂದಣಿಯನ್ನು ನಿಯಂತ್ರಿಸುವ ಹಾಗೂ ಕ್ಷೇತ್ರದ ದಿವ್ಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಕಠಿಣ ನಿಯಮಾವಳಿಗಳನ್ನು ಜಾರಿಗೆ ತರಲಾಗಿದೆ.
ಮೊಬೈಲ್ ನಿಷೇಧದಿಂದ ಹಿಡಿದು ಡ್ರೆಸ್ ಕೋಡ್‌ವರೆಗಿನ ಈ ಹೊಸ ಗೈಡ್‌ಲೈನ್ಸ್ ತಿಳಿಯದೆ ದೇವಸ್ಥಾನಕ್ಕೆ ಹೋದರೆ ಭಕ್ತರು ದರ್ಶನ ಸಿಗದೆ ಪರದಾಡುವ ಸಾಧ್ಯತೆಯಿದೆ. ಹಾಗಾಗಿ, ಕ್ಷೇತ್ರಕ್ಕೆ ಹೊರಡುವ ಮುನ್ನ ನೀವು ಪಾಲಿಸಲೇಬೇಕಾದ ಸಂಪೂರ್ಣ ವಿವರ ಇಲ್ಲಿದೆ.
ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ತಡೆಯಲು ಆಡಳಿತ ಮಂಡಳಿ ಹಲವು ಕಟ್ಟುನಿಟ್ಟಿನ ನಿಷೇಧಗಳನ್ನು ಹೇರಿದೆ.
ದೇವಸ್ಥಾನದ ಆವರಣದ ಒಳಗೆ ಮೊಬೈಲ್ ಬಳಕೆ ಮತ್ತು ಯಾವುದೇ ರೀತಿಯ ಛಾಯಾಗ್ರಹಣವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಚರ್ಮದ ಬೆಲ್ಟ್, ಪರ್ಸ್ ಸೇರಿದಂತೆ ಚರ್ಮದ ವಸ್ತುಗಳು, ಛತ್ರಿ, ಕೋಲುಗಳು ಮತ್ತು ಸಾಕು ಪ್ರಾಣಿಗಳನ್ನು ಒಳಗೆ ತರುವಂತಿಲ್ಲ.
ದೇವಸ್ಥಾನದ ಒಳಗೆ ಮತ್ತು ಹೊರಗೆ (ರಥಬೀದಿ ಹಾಗೂ ನಂದಿನಿ ನದಿ ಸೇರಿದಂತೆ) ಎಳನೀರು ಕುಡಿಯುವುದು, ಧೂಮಪಾನ ಮಾಡುವುದು, ಗುಟ್ಕಾ, ತಂಬಾಕು ಜಗಿಯುವುದು ಹಾಗೂ ಉಗುಳುವುದನ್ನು ಕಂಪ್ಲೀಟ್ ಆಗಿ ಬ್ಯಾನ್ ಮಾಡಲಾಗಿದೆ.
ಉಡುಗೆ-ತೊಡುಗೆ ಮತ್ತು ಸಂಪ್ರದಾಯದ ನಿಯಮಗಳು
ಶ್ರೀ ದೇವಿಯ ದರ್ಶನಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಪದ್ಧತಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಭಕ್ತರು ಕಡ್ಡಾಯವಾಗಿ ಭಾರತೀಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಮಾತ್ರ ದೇವಸ್ಥಾನಕ್ಕೆ ಬರಬೇಕು. ಆಧುನಿಕ ಹಾಗೂ ಅಸಭ್ಯ ಉಡುಪುಗಳಿಗೆ ಅವಕಾಶವಿಲ್ಲ. ಮಾಂಸಾಹಾರ ಸೇವನೆ ಮಾಡಿದವರಿಗೆ ಮತ್ತು ಮದ್ಯಪಾನ ಮಾಡಿದವರಿಗೆ ಕ್ಷೇತ್ರ ಪ್ರವೇಶವಿಲ್ಲ. ದೇವಸ್ಥಾನಕ್ಕೆ ಬರುವ ಮುನ್ನ ಸ್ನಾನ ಮಾಡುವುದು ಕಡ್ಡಾಯ.
ಒಂದು ವೇಳೆ ಮೃತಶರೀರದ ದರ್ಶನ ಪಡೆದಿದ್ದರೆ, ಅಂದು ಸ್ನಾನ ಮಾಡದೆ ದೇವಸ್ಥಾನ ಪ್ರವೇಶಿಸುವಂತಿಲ್ಲ.
ಮಹಿಳೆಯರು ಮತ್ತು ಸೂತಕದ ನಿಯಮಗಳು ಕಡ್ಡಾಯ ಪಾಲನೆಯಾಗಿದ್ದು, ಗರ್ಭಿಣಿ ಮಹಿಳೆಯರಿಗೆ 7 ತಿಂಗಳಾದ ಬಳಿಕ ದೇವಸ್ಥಾನಕ್ಕೆ ಬರಲು ಅವಕಾಶವಿರುವುದಿಲ್ಲ. ಮಹಿಳಾ ಭಕ್ತರು ಮುಟ್ಟಿನ ಅವಧಿಯ 5 ದಿನಗಳವರೆಗೆ ಹಾಗೂ ಕುಟುಂಬದಲ್ಲಿ ಮರಣ ಮತ್ತು ಜನನ ಸೂತಕ ಇರುವ ದಿನಗಳಲ್ಲಿ ದೇವಸ್ಥಾನದ ಒಳಗೆ ಪ್ರವೇಶಿಸಬಾರದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಶ್ರೀ ದೇವಿಗೆ ಕೇವಲ ಬಾಳೆ ಹಗ್ಗದಲ್ಲಿ ನೈಸರ್ಗಿಕವಾಗಿ ನೇಯ್ದ ಮಲ್ಲಿಗೆ ಹೂವನ್ನು ಮಾತ್ರ ಅರ್ಪಿಸಬೇಕು. ಬೇರೆ ದಾರ ಬಳಸಿ ಕಟ್ಟಿದ ಹೂವುಗಳನ್ನು ಸ್ವೀಕರಿಸಲಾಗುವುದಿಲ್ಲ.
ಏಕಾದಶಿಯ ದಿನದಂದು ದೇವಸ್ಥಾನದಲ್ಲಿ ಯಾವುದೇ ರೀತಿಯ ವಿಶೇಷ ಪೂಜೆಗಳು ಇರುವುದಿಲ್ಲ. ದೇವಸ್ಥಾನದ ಒಳಗೆ ಅನಗತ್ಯವಾಗಿ ಜೋರಾಗಿ ಮಾತನಾಡುವುದು ಅಥವಾ ಚರ್ಚೆಗಳನ್ನು ಮಾಡುವುದನ್ನು ನಿರ್ಬಂಧಿಸಲಾಗಿದೆ. ಜತೆಗೆ ಪ್ರಸಾದ ರೂಪದ ಆಹಾರ ಹೊರತುಪಡಿಸಿ ಬೇರೆ ಯಾವುದೇ ಹೊರಗಿನ ಆಹಾರ ಸೇವನೆಗೆ ಅವಕಾಶವಿಲ್ಲ.
ಭಕ್ತರು ತಮ್ಮ ಚಿನ್ನಾಭರಣ ಹಾಗೂ ಅಮೂಲ್ಯ ವಸ್ತುಗಳ ಬಗ್ಗೆ ತಾವೇ ಜಾಗ್ರತೆ ವಹಿಸಬೇಕು. ವಾರಾಂತ್ಯ ಹಾಗೂ ಹಬ್ಬದ ದಿನಗಳಲ್ಲಿ ಜನಸಂದಣಿ ಹೆಚ್ಚಿರುವಾಗ ಅನ್ನಪ್ರಸಾದ ಹಾಗೂ ವಸತಿ ವ್ಯವಸ್ಥೆಯಲ್ಲಿ ಸ್ವಲ್ಪ ವ್ಯತ್ಯಯವಾದರೆ ಭಕ್ತರು ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಭಕ್ತಾದಿಗಳು ಈ ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ, ಕಟೀಲು ಅಮ್ಮನ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆ ಕೋರಿದೆ.







