ಸಮಗ್ರ ನ್ಯೂಸ್: “ಚಿನ್ನ ಖರೀದಿಸಬೇಡಿ, ಇಂದಿರಾ ಮನವಿ; ರಾಷ್ಟ್ರೀಯ ಶಿಸ್ತಿಗಾಗಿ ಕರೆ” ಎಂಬ ಶೀರ್ಷಿಕೆಯಡಿ ದಿ ಹಿಂದೂ ಪತ್ರಿಕೆಯಲ್ಲಿ 1967, ಜೂನ್ 6ರಂದು ಪ್ರಕಟವಾಗಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ನಕಲಿ ಎಂದು ದಿ ಹಿಂದೂ ಪತ್ರಿಕೆ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ‘ದಿ ಹಿಂದೂ’ ಪತ್ರಿಕೆಯ ಹಳೆಯ ಮುಖಪುಟವೊಂದರ ಫೋಟೋ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಇದರಲ್ಲಿ ಜೂನ್ 6, 1967ರ ದಿನಾಂಕವಿದ್ದು, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ವಿದೇಶಿ ವಿನಿಮಯದ ಕೊರತೆಯನ್ನು ನೀಗಿಸಲು ಜನರು ಚಿನ್ನವನ್ನು ಖರೀದಿಸಬಾರದು ಎಂದು ಮನವಿ ಮಾಡಿದ್ದಾರೆ ಎಂಬ ಶೀರ್ಷಿಕೆಯಿದೆ. ಆದರೆ, ಪೋಸ್ಟರ್ ನಕಲಿ ಎಂದು ಕಂಡು ಬಂದಿದೆ.
ಈ ಕುರಿತು ಎಕ್ಸ್ ಮೂಲಕ ಅಧಿಕೃತ ಸ್ಪಷ್ಟನೆ ನೀಡಿರುವ ‘ದಿ ಹಿಂದೂ’ ಪತ್ರಿಕಾ ಸಂಸ್ಥೆಯು, ಜೂನ್ 6, 1967ರ ಪತ್ರಿಕೆಯ ಮುಖಪುಟವೆಂದು ಹಂಚಿಕೆಯಾಗುತ್ತಿರುವ ಈ ಚಿತ್ರವು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಮಾರ್ಪಡಿಸಲಾದ ನಕಲಿ ಚಿತ್ರವಾಗಿದೆ ಎಂದು ತಿಳಿಸಿದೆ. ಇದು ತಮ್ಮ ಪತ್ರಿಕೆಯ ದಾಖಲೆಗಳಲ್ಲಿರುವ ಅಧಿಕೃತ ಪುಟವಲ್ಲ ಎಂದು ಪತ್ರಿಕೆಯು ಸ್ಪಷ್ಟವಾಗಿ ನಿರಾಕರಿಸಿದೆ.
ಇಂತಹ ಹಳೆಯ ಪತ್ರಿಕೆಯ ಕ್ಲಿಪಿಂಗ್‌ಗಳ ಹೆಸರಿನಲ್ಲಿ ಹರಿದಾಡುವ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪತ್ರಿಕೆ ವಿನಂತಿಸಿದೆ. ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಗತ್ಯವಾಗಿದ್ದು, ತಪ್ಪುದಾರಿಗೆಳೆಯುವ ಇಂತಹ ಡಿಜಿಟಲ್ ಮಾರ್ಪಾಡಿತ ಚಿತ್ರಗಳ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಹಾಗಾದರೆ ಇಂದಿರಾ ಗಾಂಧಿ ಆ ರೀತಿ ಹೇಳಿಲ್ಲವೇ?
ಹೌದು, ಮೂಲಗಳ ಪ್ರಕಾರ ಪ್ರಧಾನಿ ಆಗಿದ್ದಾಗ ಇಂದಿರಾ ಗಾಂಧಿ ಅವರು ಆ ರೀತಿ ಹೇಳಿಲ್ಲ. ಇದಕ್ಕೆ ಸಂಬಂಧಿಸಿದ ಯಾವುದೇ ಪ್ರತಿಕಾ ವರದಿಗಳಿಲ್ಲ. ಅಲ್ಲದೆ, ಗೂಗಲ್ ಜೆಮಿನಿ ಹಾಗೂ ಗ್ರೋಕ್ನಂತಹ ಎಐನಲ್ಲೂ ಸರ್ಚ್ನಲ್ಲೂ ಇದಕ್ಕೆ ಪೂರಕವಾದ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಆದರೆ, 1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರು ಚಿನ್ನವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡುವಂತೆ ದೇಶದ ಜನತೆಯಲ್ಲಿ ಮನವಿ ಮಾಡಿದ್ದರು. ರಕ್ಷಣಾ ಸಚಿವಾಲಯವು 2009ರಲ್ಲಿ ಪ್ರಕಟಿಸಿದ ಕಾಫಿ ಟೇಬಲ್ ಪುಸ್ತಕದ ಪ್ರಕಾರ, ಯುದ್ಧದ ಸಮಯದಲ್ಲಿ ಇಂದಿರಾ ಗಾಂಧಿಯವರು ರಾಷ್ಟ್ರೀಯ ಪರಿಹಾರ ನಿಧಿಗೆ 367 ಗ್ರಾಂ ಚಿನ್ನಾಭರಣಗಳನ್ನು ದೇಣಿಗೆಯಾಗಿ ನೀಡಿದ್ದರು. ಆದರೆ, ಇಂದಿರಾ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಆ ರೀತಿಯಾದ ಯಾವುದೇ ಘೋಷಣೆಯನ್ನು ಮಾಡಿರಲಿಲ್ಲ.
ಇಂದಿರಾ ಗಾಂಧಿ ಅವರು 1967ರಲ್ಲಿ ಪ್ರಧಾನಿಯಾಗಿದ್ದಾಗ ಚಿನ್ನವನ್ನು ಖರೀದಿ ಮಾಡಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದರು ಅಂತ ಬಿಜೆಪಿ ನಾಯಕರು ಹಿಂದೂ ಪತ್ರಿಕೆಯ ನಕಲಿ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಮಾಜಿ ಸಚಿವ ಸುಧಾಕರ್ ಅವರು ಪೋಸ್ಟರ್ ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ ಎಂದು ಕಾಂಗ್ರೆಸ್ ನಾಯಕರು ವಾದಿಸುತ್ತಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಾಸ್ತವ ಏನೆಂದರೆ, ಇಂದಿರಾ ಗಾಂಧಿ ಅವರು ಚಿನ್ನ ಖರೀದಿ ಮಾಡಬೇಡಿ ಎಂದು ಹೇಳೇ ಇಲ್ಲ. ಹಿಂದೂ ಪತ್ರಿಕೆ ಕೂಡ ಆ ರೀತಿಯ ಯಾವುದೇ ವರದಿ ಮಾಡಿಲ್ಲ, ಹರಿದಾಡುತ್ತಿರುವ ಪೋಸ್ಟರ್ ನಕಲಿ ಎಂದು ಹೇಳಿದೆ.
ಮೇ ತಿಂಗಳಲ್ಲಿ ಭಾರತವು ಮತ್ತೊಂದು ಜಾಗತಿಕ ಆರ್ಥಿಕ ಆಘಾತವನ್ನು ಎದುರಿಸುತ್ತಿದೆ. ಈ ಬಾರಿ ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷ ಮತ್ತು ವಿಶ್ವದ ಅತ್ಯಂತ ನಿರ್ಣಾಯಕ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯ ಸುತ್ತಲಿನ ಉದ್ವಿಗ್ನತೆಯಿಂದಾಗಿ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಸನ್ನಿವೇಶವು ದಶಕಗಳ ಹಿಂದಿನ ಆರ್ಥಿಕ ಸವಾಲುಗಳನ್ನು ನೆನಪಿಸುವಂತಿದ್ದು, ದೇಶದ ಆರ್ಥಿಕತೆಯನ್ನು ಸ್ಥಿರವಾಗಿಡಲು ಕಠಿಣ ಕ್ರಮಗಳ ಅಗತ್ಯತೆಯನ್ನು ಎತ್ತಿ ತೋರಿಸುತ್ತಿದೆ. ಜಾಗತಿಕವಾಗಿ ಕಚ್ಚಾ ತೈಲದ ಬೆಲೆಗಳು ಏರುತ್ತಿರುವ ಸಮಯದಲ್ಲಿ, ಅನಿವಾರ್ಯವಲ್ಲದ ಆಮದುಗಳು ಭಾರತದ ವಿದೇಶಿ ವಿನಿಮಯ ಮೀಸಲು ಮೇಲೆ ಭಾರಿ ಒತ್ತಡ ಹೇರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಸಿದ್ದಾರೆ. ಈ ಕಾರಣದಿಂದಾಗಿ, ಕನಿಷ್ಠ ಒಂದು ವರ್ಷದವರೆಗೆ ಚಿನ್ನವನ್ನು ಖರೀದಿಸುವುದನ್ನು ತಪ್ಪಿಸುವಂತೆ ಅವರು ನಾಗರಿಕರಿಗೆ ಮನವಿ ಮಾಡಿದ್ದಾರೆ. ಇತ್ತೀಚಿನ ವಾರಗಳಲ್ಲಿ ಜಾಗತಿಕ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಸುಮಾರು $70 ರಿಂದ ಸುಮಾರು $126 ಕ್ಕೆ ತೀವ್ರವಾಗಿ ಏರಿಕೆಯಾಗಿದ್ದು, ಇದು ಭಾರತದ ಆಮದು ವೆಚ್ಚವನ್ನು ಗಮನಾರ್ಹವಾಗಿ ಹೆಚ್ಚಿಸಿದೆ.
ಆರ್ಥಿಕ ದೃಷ್ಟಿಕೋನದಿಂದ ಭಾರತಕ್ಕೆ ಚಿನ್ನ ಮತ್ತು ಕಚ್ಚಾ ತೈಲ ಎರಡೂ ಒಂದೇ ರೀತಿಯ ಸವಾಲನ್ನು ಒಡ್ಡುತ್ತವೆ, ಏಕೆಂದರೆ ಇವೆರಡೂ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದ್ದು ಇವುಗಳ ಹಣವನ್ನು ಯುಎಸ್ ಡಾಲರ್‌ಗಳಲ್ಲಿ ಪಾವತಿಸಲಾಗುತ್ತದೆ. ಭಾರತವು ತನ್ನ ಕಚ್ಚಾ ತೈಲದ ಅವಶ್ಯಕತೆಯ ಸುಮಾರು 85% ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ವಿಶ್ವದ ಅತಿದೊಡ್ಡ ಚಿನ್ನದ ಗ್ರಾಹಕರಲ್ಲಿ ಒಂದಾಗಿ ಮುಂದುವರಿದಿದೆ. ಆದ್ದರಿಂದ, ವಿದೇಶಿ ವಿನಿಮಯವನ್ನು ಉಳಿಸಲು ಈ ಕಠಿಣ ಕ್ರಮದ ಅಗತ್ಯವಿದೆ ಎಂದು ಪ್ರಧಾನಿ ಒತ್ತಿಹೇಳಿದ್ದಾರೆ.
ಕಚ್ಚಾ ತೈಲದ ಬೆಲೆಗಳು ತೀವ್ರವಾಗಿ ಏರಿಕೆ ಕಂಡಾಗ ಮತ್ತು ಚಿನ್ನದ ಆಮದು ಕೂಡ ಅಧಿಕವಾಗಿದ್ದಾಗ, ಇವುಗಳ ಪಾವತಿಗಾಗಿ ಭಾರತಕ್ಕೆ ಹೆಚ್ಚಿನ ಪ್ರಮಾಣದ ಡಾಲರ್‌ಗಳ ಅಗತ್ಯವಿರುತ್ತದೆ. ಇದರಿಂದಾಗಿ ಅಮೆರಿಕನ್ ಡಾಲರ್‌ಗೆ ಬೇಡಿಕೆ ಹೆಚ್ಚಾಗಿ, ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತದೆ ಮತ್ತು ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯ ಮೇಲೆ ಭಾರಿ ಒತ್ತಡ ಉಂಟಾಗುತ್ತದೆ. ಈ ಆರ್ಥಿಕ ಸವಾಲನ್ನು ಎದುರಿಸಲು ಪ್ರಧಾನಿ ಮೋದಿ ಅವರು ಕೇವಲ ಚಿನ್ನದ ಖರೀದಿ ಮುಂದೂಡಲು ಮಾತ್ರವಲ್ಲದೆ, ಇಂಧನ ಬಳಕೆಯನ್ನು ಕಡಿಮೆ ಮಾಡಲು, ಅನಿವಾರ್ಯವಲ್ಲದ ವಿದೇಶಿ ಪ್ರಯಾಣಗಳನ್ನು ತಡೆಹಿಡಿಯಲು, ವರ್ಕ್ ಫ್ರಮ್ ಹೋಮ್ (WFH) ಪದ್ಧತಿಯನ್ನು ಅಳವಡಿಸಿಕೊಳ್ಳಲು ಮತ್ತು ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಬೆಂಬಲ ನೀಡಲು ಕರೆ ನೀಡಿದ್ದಾರೆ.







