ಸಮಗ್ರ ನ್ಯೂಸ್: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಹಾಗೂ ಇರಾನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಔಷಧಗಳ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದು, ಅಗತ್ಯ ಔಷಧಗಳ ಬೆಲೆಯನ್ನು ಶೇ. 10 ರಿಂದ 20 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಸರ್ಕಾರದ ಬೆಲೆ ನಿಯಂತ್ರಣ ವ್ಯಾಪ್ತಿಗೆ ಬರುವ ಅತ್ಯಗತ್ಯ ಔಷಧಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇದರಲ್ಲಿ ಮುಖ್ಯವಾಗಿ ಕ್ಯಾನ್ಸರ್ ಚಿಕಿತ್ಸೆಯ ಔಷಧಗಳು, ವಿವಿಧ ರೋಗಗಳಿಗೆ ಬಳಸುವ ಆಂಟಿಬಯೋಟಿಕ್ಸ್, ಜೀವ ರಕ್ಷಕ ಇಂಜೆಕ್ಷನ್ಗಳು, ಈ ಬೆಲೆ ಏರಿಕೆಯು ಕೇವಲ ತಾತ್ಕಾಲಿಕವಾಗಿದ್ದು, ಪ್ರಾಥಮಿಕವಾಗಿ 3 ತಿಂಗಳ ಅವಧಿಗೆ ಮಾತ್ರ ಅನ್ವಯವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಔಷಧಗಳ ತಯಾರಿಕೆಯಲ್ಲಿ ಬಳಸುವ ‘ಸಾಲ್ವೆಂಟ್ಸ್’ ಎಂಬ ರಾಸಾಯನಿಕಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ. ಗಲ್ಫ್ ರಾಷ್ಟ್ರಗಳಿಂದ ಆಮದಾಗುವ ಕಚ್ಚಾ ತೈಲ ಮತ್ತು ಅನಿಲ ಆಧಾರಿತ ರಾಸಾಯನಿಕಗಳ ಸರಬರಾಜು ಕುಂಠಿತಗೊಂಡಿದೆ.
ಸಾಲ್ವೆಂಟ್ಗಳ ಕೊರತೆಯಿಂದಾಗಿ ಅವುಗಳ ಬೆಲೆ ಏರಿದ್ದು, ಔಷಧ ಕಂಪನಿಗಳಿಗೆ ಉತ್ಪಾದನಾ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಬೆಲೆ ಹೆಚ್ಚಳ ಮಾಡದಿದ್ದರೆ, ಔಷಧಗಳ ಉತ್ಪಾದನೆಯು ಆರ್ಥಿಕವಾಗಿ ನಷ್ಟದ ಹಾದಿ ಹಿಡಿಯಲಿದ್ದು, ಮಾರುಕಟ್ಟೆಯಲ್ಲಿ ಔಷಧಗಳ ಕೊರತೆ ಉಂಟಾಗಬಹುದು ಎಂದು ತಯಾರಕರು ಎಚ್ಚರಿಸಿದ್ದಾರೆ.
ಔಷಧ ಉದ್ಯಮದ ಸಂಘಟನೆಗಳು (OPPI ಮತ್ತು IPA) ವೆಚ್ಚದ ಆಧಾರದ ಮೇಲೆ ಶೇ. 50 ರಷ್ಟು ಬೆಲೆ ಏರಿಕೆಗೆ ಬೇಡಿಕೆ ಇಟ್ಟಿದ್ದವು. ಆದರೆ, ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರ ಕೇವಲ ಶೇ. 10-20 ರಷ್ಟು ಮಾತ್ರ ಹೆಚ್ಚಳ ಮಾಡಲು ಒಲವು ತೋರಿದೆ. ಜಾಗತಿಕ ಪೂರೈಕೆ ವ್ಯವಸ್ಥೆ ಸುಧಾರಿಸಿದ ತಕ್ಷಣ, ಬೆಲೆಗಳನ್ನು ಹಳೆಯ ದರಕ್ಕೆ ಇಳಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
ಸರ್ಕಾರವು ಸದ್ಯ ಆಂತರಿಕ ಸಮಾಲೋಚನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಿದೆ. ಈ ಅಧಿಸೂಚನೆ ಪ್ರಕಟವಾದ ತಕ್ಷಣ ಮೆಡಿಕಲ್ ಸ್ಟೋರ್ಗಳಲ್ಲಿ ಔಷಧಗಳ ಹೊಸ ದರ ಜಾರಿಗೆ ಬರಲಿದೆ.







