ಸಮಗ್ರ ನ್ಯೂಸ್: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೂರನೇ ಐಪಿಎಲ್ ಪಂದ್ಯವನ್ನು ಸ್ಮರಣೀಯವನ್ನಾಗಿಸುವ ಸುವರ್ಣಾವಕಾಶವನ್ನು ರಾಯಲ್ ಚಾಲೆಂಜರ್ಸ್ ತಂಡವು ಸ್ವಲ್ಪದರಲ್ಲಿ
ತಪ್ಪಿಸಿಕೊಂಡಿತು. ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡವು 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಣಿಯಿತು. ಇದರೊಂದಿಗೆ ತವರಿನಲ್ಲಿ ಆರ್‌ಸಿಬಿ ತಂಡದ ಅಜೇಯ ಓಟಕ್ಕೂ ತಡೆಬಿತ್ತು.
ಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ಇದು ಇಲ್ಲಿ ನೂರನೇ ಪಂದ್ಯವಾಗಿತ್ತು. ಈ ಮೈಲಿಗಲ್ಲು ತಲುಪಿದ ಮೊದಲ ತಂಡ ಎಂಬ ಹಿರಿಮೆಗೂ ಪಾತ್ರವಾಯಿತು. ‘ಶತಕದ ಪಂದ್ಯ’ವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಜಯಿಸಿ ನೆನಪಿನಲ್ಲಿ ಉಳಿಯುವಂತೆ ಮಾಡುವ ಅವಕಾಶವಿತ್ತು. ಅದಕ್ಕೆ, ಡೆಲ್ಲಿ ಬ್ಯಾಟರ್‌ಗಳಾದ ಕನ್ನಡಿಗ ಕೆ.ಎಲ್. ರಾಹುಲ್ (57;34ಎ) ಮತ್ತು ಟ್ರಿಸ್ಟನ್ ಸ್ಟಬ್ಸ್ (ಔಟಾಗದೇ 60;47ಎ) ಆಸ್ಪದ ನೀಡಲಿಲ್ಲ.
ಅವರಿಬ್ಬರ ಅರ್ಧಶತಕದ ನೆರವಿನಿಂದ ಅಕ್ಷರ್ ಪಟೇಲ್ ಪಡೆಯು ಗೆಲುವಿನ ಹಳಿಗೆ ಮರಳಿತು. ಕೊನೆಯಲ್ಲಿ ಡೇವಿಡ್ ಮಿಲ್ಲರ್, ಹಿಂದಿನ ಪಂದ್ಯದ ತಪ್ಪನ್ನು ಮಾಡದೇ ಫಿನಿಷರ್ ಪಾತ್ರ ನಿರ್ವಹಿಸಿದರು.
ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಲುಂಗಿ ಎನ್‌ಗಿಡಿ (39ಕ್ಕೆ 2), ಕುಲದೀಪ್ ಯಾದವ್ (32ಕ್ಕೆ 2) ಮತ್ತು ಅಕ್ಷರ್ (18ಕ್ಕೆ 2) ಪರಿಣಾಮಕಾರಿ ದಾಳಿ ನಡೆಸಿದರು. ಇದರಿಂದಾಗಿ ಆರ್‌ಸಿಬಿ ತಂಡವನ್ನು 8 ವಿಕೆಟ್‌ಗೆ 175 ರನ್‌ಗಳಿಗೆ ನಿಯಂತ್ರಿಸಿದರು. ಆರಂಭ ಆಟಗಾರ ಫಿಲ್ ಸಾಲ್ಟ್ (63;38ಎ) ಹೊರತುಪಡಿಸಿ ಉಳಿದವರು ನಿರಾಸೆ ಮೂಡಿಸಿದರು.
ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ವೇಗಿ ಭುವನೇಶ್ವರ್ ಕುಮಾರ್ ಆರಂಭದಲ್ಲೇ ಬಲವಾದ ಪೆಟ್ಟು ನೀಡಿದರು. ಮೊದಲ ಓವರ್‌ನಲ್ಲಿ ಪಥುಮ್ ನಿಸಾಂಕ (1) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಮೂರನೇ ಓವರ್‌ನಲ್ಲಿ ಕನ್ನಡಿಗ ಕರುಣ್ ನಾಯರ್ (5) ಮತ್ತು ಸಮೀರ್ ರಿಜ್ವಿ (2) ಅವರ ವಿಕೆಟ್‌ಗಳನ್ನು ಪಡೆದು ತಂಡಕ್ಕೆ ಆರಂಭಿಕ ಮೇಲುಗೈ ಒದಗಿಸಿದರು.
18 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ರಾಹುಲ್ ಮತ್ತು ಸ್ಟಬ್ಸ್ ಆಸರೆಯಾದರು. ನಾಲ್ಕನೇ ವಿಕೆಟ್‌ಗೆ ಅಮೂಲ್ಯ 69 (44 ಎಸೆತ) ರನ್ ಸೇರಿಸಿದರು. ಕೃಣಾಲ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ರಾಹುಲ್, ವಿರಾಟ್ ಅವರಿಗೆ ಕ್ಯಾಚ್ ಆದರು. ಲಾಂಗ್ ಆಫ್‌ನಿಂದ ಎಡಕ್ಕೆ ಓಡಿ ಬಂದ ವಿರಾಟ್ ಚೆಂಡನ್ನು ಡೈವ್ ಮಾಡಿ ಹಿಡಿದರು.
ಸ್ಟಬ್ಸ್ ಅವರನ್ನು ಸೇರಿಕೊಂಡ ಅಕ್ಷರ್ (26;16ಎ) ಮತ್ತಷ್ಟು ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಆಟದ ವೇಳೆ ಕಾಲು ನೋವಿಗೆ ಎರಡು ಬಾರಿ ಪ್ರಥಮ ಚಿಕಿತ್ಸೆ ಪಡೆದುಕೊಂಡ ಅಕ್ಷರ್ ಆಟ ಮುಂದುವರಿಸಲಾಗದೇ ಪೆವಿಲಿಯನ್‌ಗೆ ಮರಳಿದರು. ಈ ಹಂತದಲ್ಲಿ ಭುವಿ ಮತ್ತು ಹ್ಯಾಜಲ್‌ವುಡ್ ಬಿಗಿದಾಳಿ ನಡೆಸಿದ್ದರಿಂದ ಪಂದ್ಯ ರೋಚಕವಾಯಿತು. ಅಕ್ಷರ್ ಮರಳಿದ ನಂತರ ಕ್ರೀಸ್‌ಗಿಳಿದ ‘ಕಿಲ್ಲರ್’ ಮಿಲ್ಲರ್ ಕೊನೆಯ ಓವರಿನಲ್ಲಿ ಪರಾಕ್ರಮ ಮೆರೆದರು.
ಕೊನೆಯ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ 15 ರನ್ ಬೇಕಿದ್ದವು. ರಜತ್ ಪಾಟೀದಾರ್ ಚೆಂಡನ್ನು ರೊಮಾರಿಯೊ ಶೆಫರ್ಡ್ ಕೈಗೆ ನೀಡಿದರು. ಮೊದಲ ಎರಡು ಎಸೆತಗಳಲ್ಲಿ ತಲಾ ಒಂದು ರನ್ ಬಂದಿದ್ದರಿಂದ ಆರ್‌ಸಿಬಿ ಅಭಿಮಾನಿಗಳ ಗೆಲುವಿನ ನಿರೀಕ್ಷೆ ಮೂಡಿತು. ಆದರೆ, ನಂತರದ ಎಸೆತಗಳಲ್ಲಿ ಮಿಲ್ಲರ್ ಕ್ರಮವಾಗಿ ಎರಡು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಸಂಭ್ರಮಿಸಿದರು. ಒಂದು ಎಸೆತ ಬಾಕಿ ಇರುವಂತೆ ಡೆಲ್ಲಿ ತಂಡವು 4 ವಿಕೆಟ್‌ಗೆ 179 ರನ್ ಗಳಿಸಿ ಜಯ ಸಾಧಿಸಿತು.
ಸಾಲ್ಟ್ ಆಸರೆ: ಇದಕ್ಕೂ ಮೊದಲು ಸಾಲ್ಟ್ ಮತ್ತು ವಿರಾಟ್ ಕೊಹ್ಲಿ (19;13ಎ) ಮೊದಲ ವಿಕೆಟ್‌ಗೆ 52 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಎನ್‌ಗಿಡಿ ಹಾಕಿದ ಆರನೇ ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಡೀಪ್ ಪಾಯಿಂಟ್‌ನಲ್ಲಿದ್ದ ಪಥುಮ್ ನಿಸಾಂಕ ಕ್ಯಾಚ್ ಪಡೆದರು.
ಇಂಪ್ಯಾಕ್ಟ್ ಆಟಗಾರನಾಗಿ ಬಂದ ಸ್ಥಳೀಯ ತಾರೆ ದೇವದತ್ತ ಪಡಿಕ್ಕಲ್ (18;13ಎ) ಅಕ್ಷರ್ ಬೌಲಿಂಗ್‌ನಲ್ಲಿ ಮಿಲ್ಲರ್ ಅವರಿಗೆ ಕ್ಯಾಚಿತ್ತು ಬೇಗನೆ ನಿರ್ಗಮಿಸಿದರು. 30 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಸಾಲ್ಟ್ ಮತ್ತೊಂದು ಉಪಯುಕ್ತ ಇನಿಂಗ್ಸ್ ಆಡಿದರು.
ಪಾಟೀದಾರ್ (8) ಬೇಗನೇ ನಿರ್ಗಮಿಸಿದರು. ವೇಗಿ ಮುಕೇಶ್ ಕುಮಾರ್ ಎಸೆತದಲ್ಲಿ ಚೆಂಡು ರಜತ್ ಬ್ಯಾಟ್‌ಗೆ ಸವರಿ ವಿಕೆಟ್ ಕೀಪರ್ ರಾಹುಲ್ ಕೈ ಸೇರಿತು. ಅವರು ಔಟಾಗುವುದರೊಂದಿಗೆ ಆರ್‌ಸಿಬಿಯ ರನ್ ವೇಗಕ್ಕೂ ಕಡಿವಾಣ ಬಿತ್ತು.
ಒಂದು ಹಂತದಲ್ಲಿ 12.3 ಓವರ್‌ಗಳಲ್ಲಿ 3 ವಿಕೆಟ್‌ಗೆ 131 ರನ್ ಗಳಿಸಿದ್ದ ತಂಡವು ದ್ವಿಶತಕದ ಗಡಿ ದಾಟುವ ನಿರೀಕ್ಷೆಯಲ್ಲಿತ್ತು. ಆದರೆ, ಡೆಲ್ಲಿ ಬೌಲರ್‌ಗಳ ಬಿಗಿದಾಳಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ತಿಣುಕಾಡಿದರು. ಟಿಮ್ ಡೇವಿಡ್ (26;17ಎ) ಕೆಲಕಾಲ ಹೋರಾಟ ತೋರಿದರು. ಹೀಗಾಗಿ, ಕೊನೆಯ ಐದು ಓವರ್‌ಗಳಲ್ಲಿ ಕೇವಲ 29 ರನ್‌ಗಳಷ್ಟೇ ತಂಡದ ಖಾತೆ ಸೇರಿದವು.
ನಂತರ ನಡೆದ ಮತ್ತೊಂದು ಪಂದ್ಯದಲ್ಲಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು ಮಣಿಸಿದ ಸನ್‌ರೈಸರ್ಸ್ ಲೀಗ್ನಲ್ಲಿ ಮೂರನೇ ಗೆಲುವು ದಾಖಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
ಇತ್ತ ಕಳೆದೆರಡು ಪಂದ್ಯಗಳಲ್ಲಿ ಗೆದ್ದು ಗೆಲುವಿನ ಹಾದಿಗೆ ಮರಳಿದ್ದ ಸಿಎಸ್ಕೆ ಮತ್ತೆ ಸೋಲಿನ ಸುಳಿಗೆ ಸಿಲುಕಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ತಂಡ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ 184 ರನ್ ಕಲೆಹಾಕಲಷ್ಟೇ ಶಕ್ತವಾಗಿ 10 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ಸಿಎಸ್ಕೆ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಉಳಿದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಎಂದಿನಂತೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 59 ರನ್ ಗಳಿಸಿದರು. ಇದರಲ್ಲಿ ಅವರು 6 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ಟ್ರಾವಿಸ್ ಹೆಡ್ 20 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ನಾಯಕ ಇಶಾನ್ ಕಿಶನ್ ಈ ಪಂದ್ಯದಲ್ಲಿ ನಿರಾಶೆ ಮೂಡಿಸಿ ಶೂನ್ಯಕ್ಕೆ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ತಂಡದ ಇನ್ನಿಂಗ್ಸ್ ನಿಭಾಯಿಸಿದ ಹೆನ್ರಿಕ್ ಕ್ಲಾಸೆನ್ 39 ಎಸೆತಗಳಲ್ಲಿ 59 ರನ್ಗಳ ಇನ್ನಿಂಗ್ಸ್ ಆಡಿದರು. ಇವರನ್ನು ಹೊರತುಪಡಿಸಿ ತಂಡದ ಯಾವುದೇ ಬ್ಯಾಟ್ಸ್ಮನ್ಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅನಿಕೇತ್ ವರ್ಮಾ 2, ನಿತೀಶ್ ಕುಮಾರ್ ರೆಡ್ಡಿ 12, ಸಲೀಲ್ ಅರೋರಾ 13, ಲಿಯಾಮ್ ಲಿವಿಂಗ್‌ಸ್ಟೋನ್ 1, ಶಿವಾಂಗ್ ಕುಮಾರ್ 12 ರನ್ ಗಳಿಸಲಷ್ಟೇ ಶಕ್ತರಾದರು.






