ಸಮಗ್ರ ನ್ಯೂಸ್: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಪ್ರಯುಕ್ತ ಇದೇ 16ರಂದು ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಗಳ ಭೇಟಿ, ಕೆರೆ ಉತ್ಸವ, ತೆಪ್ಪೋತ್ಸವ ಹಾಗೂ ಇದೇ 17 ರಂದು ಬ್ರಹ್ಮರಥೋತ್ಸವ ಮತ್ತು ಇದೇ 18ರಂದು ಅವಭೃತ ಸ್ನಾನಕ್ಕಾಗಿ ದೇವರು ವೀರಮಂಗಲಕ್ಕೆ ತೆರಳುವ ಸಂಪ್ರದಾಯಗಳು ನಡೆಯಲಿವೆ.
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಅವಧಿಯಲ್ಲಿ ಮದ್ಯ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬಾರ್ ಮತ್ತು ವೈನ್ ಶಾಪ್‍ಗಳನ್ನು 17ರಂದು ಬೆಳಿಗ್ಗೆ 6ರಿಂದ ಇದೇ 18ರಂದು ಬೆಳಿಗ್ಗೆ 6 ಗಂಟೆವರೆಗೆ ಮುಚ್ಚಬೇಕು. ಈ ಅವಧಿಯಲ್ಲಿ ಅಮಲು ಪದಾರ್ಥಗಳ ಮಾರಾಟವನ್ನು ಮಾಡಬಾರದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಆದೇಶ ಮಾಡಿದ್ದಾರೆ.
ಸಂಚಾರ ಮಾರ್ಗ ಬದಲಾವಣೆ: ಇದೇ 16 ರಂದು ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರದ ಆಗಮನದ ದಿನ ಮತ್ತು ಇದೇ 17 ರಂದು ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಪುತ್ತೂರು ನಗರ ವ್ಯಾಪ್ತಿಯಲಿ ಸಂಜೆ 4 ಗಂಟೆ ನಂತರ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.






