ಇಂದಿನಿಂದ ಐಪಿಎಲ್ ಹಂಗಾಮ| ಬೆಂಗಳೂರಿನಲ್ಲಿ ನಡೆಯಲಿದೆ RCB V/s SRH ನಡುವೆ ಉದ್ಘಾಟನಾ ಪಂದ್ಯ

ಸಮಗ್ರ ನ್ಯೂಸ್: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರ (ಮಾ.28) ತನ್ನ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುವ ಮೂಲಕ 2026ರ ಆವೃತ್ತಿಯ ಐಪಿಎಲ್ ಹಬ್ಬಕ್ಕೆ ಚಾಲನೆ ಸಿಗಲಿದೆ. ಚಾಂಪಿಯನ್ಸ್ ತಂಡಗಳು ಹಾಗೂ ಸ್ಟಾರ್ ಆಟಗಾರರು ತಮ್ಮ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ.

Ad Widget ... ..

ಆರ್‌ಸಿಬಿ ತಂಡವು 2026ರ ಐಪಿಎಲ್‌ಗಾಗಿ ಅಬುಧಾಬಿಯಲ್ಲಿ ನಡೆದಿದ್ದ ಮಿನಿ ಹರಾಜಿನ ವೇಳೆ ತನ್ನ 17 ಆಟಗಾರರನ್ನು ಉಳಿಸಿಕೊಂಡಿತ್ತು. ಇದೇ ಮೊದಲ ಬಾರಿ ಹಾಲಿ ಚಾಂಪಿಯನ್ ಆಗಿ ಪ್ರಸಕ್ತ ಐಪಿಎಲ್ ಟೂರ್ನಿಯನ್ನು ಪ್ರವೇಶಿಸುತ್ತಿದೆ.

Ad Widget

ಕಳೆದ ವರ್ಷ ಆರನೇ ಸ್ಥಾನ ಪಡೆದಿದ್ದ ಎಸ್‌ಆರ್‌ಎಚ್ ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ.

ಗಾಯಗೊಂಡಿರುವ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಫೋಟಕ ಆರಂಭಿಕ ಆಟಗಾರ ಇಶಾನ್ ಕಿಶನ್ ಹೈದರಾಬಾದ್ ತಂಡದ ನಾಯಕತ್ವ ವಹಿಸಲಿದ್ದಾರೆ. ಎಸ್‌ಆರ್‌ಎಚ್‌ನ ಅಗ್ರ ಸರದಿಯಲ್ಲಿ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾರಂತಹ ಆಟಗಾರರಿದ್ದಾರೆ. ಈ ಇಬ್ಬರು ಕಳೆದ ಎರಡು ವರ್ಷಗಳಿಂದ ಪವರ್ ಹಿಟ್ಟಿಂಗ್ ಸಾಮರ್ಥ್ಯದಿಂದ ಇತರ ಎಲ್ಲ ತಂಡಗಳ ನಿದ್ದೆಗೆಡಿಸಿದ್ದರು. 2024ರಲ್ಲಿ ಎಸ್‌ಆರ್‌ಎಚ್ ರನ್ನರ್ಸ್ ಅಪ್ ಆಗಿತ್ತು. ಹೆಡ್-ಅಭಿಷೇಕ್ ಪವರ್‌ಪ್ಲೇನಲ್ಲಿ ನಾಲ್ಕು ಬಾರಿ 50 ಪ್ಲಸ್ ಜೊತೆಯಾಟ ನಡೆಸಿದ್ದರು. ಲಕ್ನೊ ತಂಡದ ವಿರುದ್ಧ ಹೈದರಾಬಾದ್ ತಂಡವು ಕೇವಲ 30 ಎಸೆತಗಳಲ್ಲಿ 100 ರನ್ ಕಲೆ ಹಾಕಿತ್ತು.

ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟರ್‌ಗಳ ಸ್ವರ್ಗವಾಗಿದ್ದು, ಸರಾಸರಿ ಸ್ಕೋರ್ ಸುಮಾರು 194 ರನ್. ಬೌಂಡರಿಲೈನ್ ಚಿಕ್ಕದಾಗಿರುವ ಕಾರಣ ಬೌಲರ್‌ಗಳು ಹೆಚ್ಚು ದಂಡಿಸಲ್ಪಡಲಿದ್ದಾರೆ. ಇಬ್ಬನಿ ಹನಿ ಪ್ರಮುಖ ಪಾತ್ರವಹಿಸಲಿದ್ದು, ಟಾಸ್ ನಿರ್ಣಾಯಕವಾಗಲಿದೆ.

ಆರ್‌ಸಿಬಿ ಸಮತೋಲಿತ ತಂಡ: ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡವು ಸಮತೋಲಿತವಾಗಿದ್ದು, ‘ಎವರ್‌ಗ್ರೀನ್’ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಕನ್ನಡಿಗ ದೇವದತ್ತ ಪಡಿಕ್ಕಲ್ ಈ ತನಕ 1,806 ರನ್ ಗಳಿಸಿದ್ದು, ಅಗ್ರ ಸರದಿಯಲ್ಲಿ ಅಪಾಯಕಾರಿ ಬ್ಯಾಟರ್ ಆಗಿದ್ದಾರೆ. ಈ ಬಾರಿ ವೆಂಕಟೇಶ್ ಅಯ್ಯರ್, ಜೇಕಬ್ ಡಫಿ ಹಾಗೂ ಜೋರ್ಡನ್ ಕಾಕ್ಸ್ ಸೇರ್ಪಡೆಯಾಗಿದ್ದಾರೆ. ಫಿಲ್ ಸಾಲ್ಟ್, ಜೇಕಬ್ ಬೆಥೆಲ್, ಟಿಮ್ ಡೇವಿಡ್ ಹಾಗೂ ರೊಮಾರಿಯೊ ಶೆಫರ್ಡ್ ಆರ್‌ಸಿಬಿಗೆ ಸತತ ಎರಡನೇ ಪ್ರಶಸ್ತಿ ಗೆದ್ದುಕೊಡುವ ವಿಶ್ವಾಸ ಮೂಡಿಸಿದ್ದಾರೆ.

ಈ ತನಕ 18 ವಿಕೆಟ್‌ಗಳನ್ನು ಪಡೆದಿರುವ ಲೆಗ್ ಸ್ಪಿನ್ನರ್ ಸುಯಶ್ ಶರ್ಮಾ ಅವರು ಕೃನಾಲ್ ಪಾಂಡ್ಯ ಜೊತೆಗೂಡಿ ಮಧ್ಯಮ ಓವರ್‌ಗಳಲ್ಲಿ ನಿರ್ಣಾಯಕ ಪಾತ್ರವಹಿಸಬಹುದು. ರನ್ ವೇಗಕ್ಕೆ ಕಡಿವಾಣ ಹಾಕಿ ವಿಕೆಟ್ ಉರುಳಿಸಬಹುದು. ವೆಂಕಟೇಶ್‌ ಅಯ್ಯರ್ ಆಲ್‌ರೌಂಡ್ ಪ್ರದರ್ಶನ ನೀಡಬಲ್ಲರು. ಈ ತನಕ ಅವರು 1,468 ರನ್ ಗಳಿಸಿದ್ದು, ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ.

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಮೇಲುಗೈ: ಆರ್‌ಸಿಬಿ-ಎಸ್‌ಆರ್‌ಎಚ್ ತಂಡಗಳು ಚಿನ್ನಸ್ವಾಮಿ ಮೈದಾನದಲ್ಲಿ 2024ರಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆಗ ಎಸ್‌ಆರ್‌ಎಚ್ 3 ವಿಕೆಟ್‌ಗಳ ನಷ್ಟಕ್ಕೆ 287 ರನ್ ಗಳಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತ ಕಲೆ ಹಾಕಿ ದಾಖಲೆ ನಿರ್ಮಿಸಿತ್ತು. ಈ ಪಂದ್ಯವನ್ನು ಎಸ್‌ಆರ್‌ಎಚ್ ಗೆದ್ದುಕೊಂಡಿತ್ತು. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿ ಎರಡೂ ತಂಡಗಳು ಒಟ್ಟು 549 ರನ್ ಗಳಿಸಿದ್ದವು.

ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಸ್‌ಆರ್‌ಎಚ್ ತಂಡದ ವಿರುದ್ಧದ ಹೆಡ್-ಟು-ಹೆಡ್ ದಾಖಲೆಯಲ್ಲಿ ಆರ್‌ಸಿಬಿ ಮೇಲುಗೈ ಸಾಧಿಸಿದೆ. 8 ಪಂದ್ಯಗಳ ಪೈಕಿ ಆರ್‌ಸಿಬಿ ಐದರಲ್ಲಿ ಜಯ ಸಾಧಿಸಿದ್ದು, ಎಸ್‌ಆರ್‌ಎಚ್ ಮೂರರಲ್ಲಿ ಗೆಲುವು ಪಡೆದಿದೆ.

ತಂಡಗಳು

ಆರ್‌ಸಿಬಿ(ಸಂಭಾವ್ಯ ಆಡುವ 11ರ ಬಳಗ): ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ತ ಪಡಿಕ್ಕಲ್, ರಜತ್ ಪಾಟಿದಾರ್(ನಾಯಕ), ಜಿತೇಶ್ ಶರ್ಮಾ(ವಿಕೆಟ್‌ಕೀಪರ್), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಯಶ್ ದಯಾಳ್, ಜೇಕಬ್ ಡಫಿ, ಸುಯಶ್ ಶರ್ಮಾ(ಇಂಪ್ಯಾಕ್ಟ್ ಪ್ಲೇಯರ್)

ಎಸ್‌ಆರ್‌ಎಚ್(ಸಂಭಾವ್ಯಆಡುವ 11ರ ಬಳಗ): ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್(ನಾಯಕ), ಹೆನ್ರಿಕ್ ಕ್ಲಾಸನ್, ನಿತೀಶ್ ಕುಮಾರ್ ರೆಡ್ಡಿ, ಲಿಯಾಮ್ ಲಿವಿಂಗ್‌ಸ್ಟೋನ್, ಅನಿಕೇತ್ ವರ್ಮಾ, ಹರ್ಷ ದುಬೆ, ಹರ್ಷಲ್ ಪಟೇಲ್, ಇಶಾನ್ ಮಾಲಿಂಗ, ಜಯದೇವ್ ಉನದ್ಕಟ್, ಝೀಶನ್ ಅನ್ಸಾರಿ(ಇಂಪ್ಯಾಕ್ಟ್ ಪ್ಲೇಯರ್)

ಐಪಿಎಲ್ ಚಾಂಪಿಯನ್‌ಗಳ ಪಟ್ಟಿ(2008-2025)

19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಶನಿವಾರ ಚಾಲನೆ ಸಿಗಲಿದೆ. ಈ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಲಾ ಐದು ಬಾರಿ ಪ್ರಶಸ್ತಿಗಳನ್ನು ಜಯಿಸುವ ಮೂಲಕ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿವೆ. ಕೋಲ್ಕತಾ ನೈಟ್ ರೈಡರ್ಸ್(3), ರಾಜಸ್ಥಾನ ರಾಯಲ್ಸ್(1), ಸನ್‌ರೈಸರ್ಸ್ ಹೈದರಾಬಾದ್(1) ,ಗುಜರಾತ್ ಟೈಟಾನ್ಸ್(1)ಹಾಗೂ ಆರ್‌ಸಿಬಿ(1) ಪ್ರಶಸ್ತಿ ಜಯಿಸಿವೆ.

Leave a Comment

Your email address will not be published. Required fields are marked *