ಸಮಗ್ರ ನ್ಯೂಸ್: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಮೂಡಿಗೆರೆ ಬಣಕಲ್ ನಡುವೆ ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಗುರುವಾರ(ಆ.28) ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ಓರ್ವ ಯುವಕ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದ್ದು, ನಾಲ್ಕು ಮಂದಿ ತೀವ್ರ ಗಾಯಗೊಂಡಿದ್ದಾರೆ.
ಮೃತ ಯುವಕನನ್ನು ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಹುಯಿಲುಮನೆ ಗ್ರಾಮದ ರಮೇಶ್ ಸುಮತಿ ದಂಪತಿಗಳ ಪುತ್ರ ಅಕ್ಷಯ್ (22 ವರ್ಷ) ಅದೇ ಗ್ರಾಮದ ವಿಕಾಸ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಣಕಲ್ ಮೂಡಿಗೆರೆ ನಡುವಿನ ಹೊರಟ್ಟಿ ಗ್ರಾಮದ ಚಿಂತನ್ ಹಿಟ್ಟಿನ ಗಿರಣಿ ಬಳಿ ಈ ದುರ್ಘಟನೆ ನಡೆದಿದೆ. ಮೂಡಿಗೆರೆ ಕಡೆಗೆ ಬರುತ್ತಿದ್ದ ಇಕೋ ಸ್ಪೋರ್ಟ್ಸ್ ಕಾರು ಮತ್ತು ಬೆಂಗಳೂರು ಕಡೆಯಿಂದ ಹೊರನಾಡು ಕಡೆಗೆ ತೆರಳುತ್ತಿದ್ದ ಕ್ರೆಟಾ ಕಾರುಗಳ ನಡುವೆ ಅಪಘಾತ ಸಂಭವಿಸಿದೆ.
ಮೃತ ಅಕ್ಷಯ್ ಮತ್ತು ಗಂಭೀರವಾಗಿ ಗಾಯಗೊಂಡ ವಿಕಾಸ್ ಇವರುಗಳು ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಇದ್ದರು. ಬೆಂಗಳೂರು ಮೂಲದ ಕಾರಿನಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದು ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಕರೆದೊಯ್ಯಲಾಗಿದೆ. ಗಾಯಗೊಂಡವರನ್ನು ಗಂಗಯ್ಯ, ಹರ್ಷ, ಶ್ರೀಮತಿ ವಿಜಯ ಎಂದು ಗುರುತಿಸಲಾಗಿದೆ.






