ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣದಲ್ಲಿ SIT ತನಿಖೆ ಶುರುವಾದ ಬಳಿಕ ದಿನಕ್ಕೊಂದು ರೋಚಕ ಟ್ವಿಸ್ಟ್ ಎದುರಾಗುತ್ತಿದೆ. ಇದೀಗ ಕೋಡಿಶ್ರೀಗಳು ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಸಮಾಚಾರ, ಪ್ರಚಾರ, ವಿಚಾರ, ಅಪಪ್ರಚಾರ – ಇವುಗಳಲ್ಲಿ ಅಪಪ್ರಚಾರವೇ ಪ್ರಬಲವಾಗಿದೆ ಎಂದಿದ್ದಾರೆ
ದುರ್ದೈವ ಅಂದ್ರೆ ಅಪಪ್ರಚಾರ ಕೊನೆಗೆ ಬರಬೇಕು. ಆದರೆ ಇಂದು ಅಪಪ್ರಚಾರವೇ ಮೊದಲಿಗೆ ಬಂದಿದೆ. ಸತ್ಯ ಹೊರಬರಲು ಕಾಲಾವಕಾಶ ಬೇಕು ಎಂದು ಕೋಡಿಶ್ರೀ ಹೇಳಿದ್ದಾರೆ.
ಅಳಕು ಹೃದಯದವನಿಗೆ ಅಪಪ್ರಚಾರವೇ ಆಯುಧ. ಸತ್ಯವನ್ನು ಒಪ್ಪಿಕೊಳ್ಳಲು ಧೈರ್ಯ ಬೇಕು. ಒಳ್ಳೆಯ ದೇವರ ಗುಡಿಗಳ ಪೂಜೆ ನಿಂತು ಬಿಡುತ್ತದೆ. ಹಣೆಗೆ ವಿಭೂತಿ ಇಟ್ಟುಕೊಂಡು, ಹಣೆಯನ್ನೇ ಕೆತ್ತಿಕೊಳ್ಳುವವರು ಇದ್ದಾರೆ. ನಾಮವಿಟ್ಟರೆ ಅಳಿಸ್ಯಾರು ಎಂದು ಕೋಡಿಶ್ರೀ ಎಚ್ಚರಿಕೆ ನೀಡಿದ್ದಾರೆ.
ಧರ್ಮಕ್ಕೆ ಅವಮಾನ ಮಾಡುವ ಕಾಲ ಬಂದಿದೆ. ಧೈರ್ಯವಾಗಿ ಇದೆಲ್ಲವನ್ನೂ ಎದುರಿಸಿ, ಧರ್ಮವನ್ನು ಉಳಿಸಿಕೊಳ್ಳಬೇಕು. ಕಾಲಜ್ಞಾನದಲ್ಲಿ ಇದೆಲ್ಲವೂ ತೋರಿಬರುತ್ತಿದೆ. ಧರ್ಮಕ್ಕೆ ಅವಮಾನ ಮಾಡುವ ಕಾಲ ಹತ್ತಿರದಲ್ಲಿದೆ. ಧೈರ್ಯದಿಂದ ಎದುರಿಸಿದರೆ, ಧರ್ಮ ಉಳಿಸಬಹುದು ಎಂದು ಕೋಡಿಶ್ರೀ ತಿಳಿಸಿದ್ದಾರೆ.
ಕೋಡಿಹಳ್ಳಿ ಸ್ವಾಮೀಜಿ ಎರಡು ತಿಂಗಳ ಹಿಂದೊಮ್ಮೆ “ಅರಸನ ಅರಮನೆಗೆ ಕಾರ್ಮೋಡ ಕವಿದೀತು” ಎಂದು ಭವಿಷ್ಯ ನುಡಿದಿದ್ದರು. ಈ ಬಗ್ಗೆಯೂ ಮಾತನಾಡಿದ ಅವರು ಈ ಹೇಳಿಕೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾಯಕರಿಗೆ ಸಂಕಷ್ಟದ ಸೂಚನೆ ಸ್ಪಷ್ಟಪಡಿಸಿದ್ದಾರೆ. “ಕೇಂದ್ರದಲ್ಲಿ ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ ನೀಡಿದ್ದಾರೆ” ಎಂದು ಸ್ವಾಮೀಜಿ ಹೇಳಿದ್ದಾರೆ.
ಕೋಡಿಹಳ್ಳಿ ಸ್ವಾಮೀಜಿ ಅವರ ಭವಿಷ್ಯವಾಣಿಗಳು ಈ ಹಿಂದೆಯೂ ರಾಜಕೀಯದಲ್ಲಿ ಗಮನ ಸೆಳೆದಿವೆ. 2023ರಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ರಾಜಕೀಯ ಏಳಿಗೆಯ ಬಗ್ಗೆ ನುಡಿದ ಭವಿಷ್ಯ ನಿಜವಾಗಿತ್ತು. ಇದೀಗ ಕೆ.ಎನ್. ರಾಜಣ್ಣ ರಾಜೀನಾಮೆ ಮತ್ತು ಕೇಂದ್ರದ ಉಪ ರಾಷ್ಟ್ರಪತಿ ರಾಜೀನಾಮೆ ಭವಿಷ್ಯವಾಣಿ ಸಹ ಸತ್ಯವಾಗಿದೆ.







