ಸಮಗ್ರ ನ್ಯೂಸ್: ಬೆಳ್ಳಬೆಳಗ್ಗೆ ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಗೆ ಚಾಕು ಇರಿತ ಪ್ರಕರಣ ವರದಿಯಾಗಿದೆ. ಶೀಲ ಶಂಕಿಸಿ ಪತಿಯಿಂದಲೇ ನಟಿ ಚಾಕು ಇರಿತಕ್ಕೆ ಒಳಗಾಗಿದ್ದಾಳೆ. ಮಂಜುಳಾ ಅಲಿಯಾಸ್ ಶ್ರುತಿ ಚಾಕು ಇರಿತಕ್ಕೆ ಒಳಗಾದ ಕಿರುತೆರೆ ನಟಿ ಎಂದು ಗುರುತಿಸಲಾಗಿದೆ.
ಕನ್ನಡದಲ್ಲಿ ಅಮೃತಧಾರೆ, ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ಶ್ರುತಿ ನಟಿಸಿದ್ದಾರೆ. ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ ನಲ್ಲಿ ಘಟನೆ ನಡೆದಿದೆ. ಕಳೆದ ಜುಲೈ 4 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಜುಳಾ 20 ವರ್ಷದ ಹಿಂದೆ ಅಮರೇಶ್ ಎಚ್‌ಎಸ್‌ಎಂಬಾತನ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದರು. ಸಂಸಾರ ಸಮೇತ ಹನುಮಂತ ನಗರದಲ್ಲಿ ಲೀಸ್ ಗೆ ಮನೆ ಪಡೆದು ದಂಪತಿ ವಾಸವಿದ್ದರು. ನಂತರ ಶ್ರುತಿ ನಡವಳಿಕೆ ಗಂಡ ಅಮರೇಶ್‌ಗೆ ಇಷ್ಟವಾಗುತ್ತಿರಲಿಲ್ಲ. ಇಬ್ಬರ ನಡುವೆ ಹೊಂದಾಣಿಕೆ ಕೂಡ ಸರಿಯಿರಲಿಲ್ಲ ಎನ್ನಲಾಗಿದೆ.
ಹೀಗಾಗಿ ಗಂಡನಿಂದ ದೂರಾಗಿ ಶ್ರುತಿ ಅಣ್ಣನ ಮನೆಯಲ್ಲಿ ವಾಸವಿದ್ದರು. ಕಳೆದ ಏಪ್ರಿಲ್‌ನಲ್ಲಿ ಶ್ರುತಿ ಗಂಡನಿಂದ ದೂರವಾಗಿದ್ದರು. ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಸಹ ಜಗಳ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತಂತೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಶ್ರುತಿ ದೂರು ನೀಡಿದ್ದಳು.
ಇದಾದ ಬಳಿಕ ಕಳೆದ ಗುರುವಾರ ರಾಜಿ ಸಂದಾನ ಮಾಡಿ ಗಂಡ-ಹೆಂಡತಿ ಒಂದಾಗಿದ್ದರು. ಆದರೆ, ಇಬ್ಬರೂ ಒಂದಾದ ಮಾರನೇ ದಿನವೇ ಗಂಡ ಪತ್ನಿಗೆ ಚಾಕು ಇರಿದಿದ್ದಾನೆ.
ಕಳೆದ ಶುಕ್ರವಾರ ಮಕ್ಕಳಿಬ್ಬರು ಕಾಲೇಜಿಗೆ ಹೋದ ನಂತರ ಹೆಂಡತಿಯ ಮೇಲೆ ಹಲ್ಲೆ ನಡೆದಿದೆ. ಪೆಪ್ಪರ್ ಸ್ಪ್ರೇ ಹೊಡೆದು ಹೆಂಡತಿಗೆ ಚಾಕು ಇರಿದು ಕೊಲೆಗೆ ಯತ್ನ ನಡೆಸಿದ್ದಾನೆ. ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಪತಿ ಅಮರೇಶ್ ಕೊಲೆಗೆ ಯತ್ನ ನಡೆಸಿದ್ದಾರೆ.






