ಸಮಗ್ರ ನ್ಯೂಸ್: 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದ್ದು ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆಯನ್ನು ಅನುಷ್ಠಾನ ಮಾಡಲು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿಯನ್ನು ನಿಗದಿಪಡಿಸಲಾಗಿರುತ್ತದೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಕೃಷಿ ಬೆಳೆಗೆ ಸಂಬಂಧಿಸಿದಂತೆ ಭತ್ತವು ನೋಂದಾಯಿತ ಬೆಳೆಯಾಗಿದ್ದು, ಭತ್ತ ಬೆಳೆಯುವ ರೈತರು ಈ ಯೋಜನೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಈ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಯಾವುದೇ ಪ್ರಕೃತಿ ವಿಕೋಪಗಳಿಂದ/ಹವಾಮಾನ ವೈಪರೀತ್ಯದಿಂದಾಗಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.25ರ ಭಾಗವನ್ನು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. ಕಟಾವಿನ ನಂತರದ ಸಮಯದಲ್ಲಿ ಬೆಳೆಯನ್ನು ಒಣಗಿಸಲು ಬಿಟ್ಟ ಸಂದರ್ಭದಲ್ಲಿ 2 ವಾರದೊಳಗೆ ಅಕಾಲಿಕ ಮಳೆ/ಚಂಡಮಾರುತ ಸಹಿತ ಮಳೆಯಿಂದಾಗಿ ಕಟಾವು ಮಾಡಲಾದ ಬೆಳೆಯು ನಾಶವಾದರೆ ವಿಮಾ ಸಂಸ್ಥೆಯು ವೈಯಕ್ತಿಕವಾಗಿ ಬೆಳೆ ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುತ್ತದೆ.
ದ.ಕ ಜಿಲ್ಲೆಯಲ್ಲಿ ಅಡಿಕೆ, ಕರಿಮೆಣಸು ಬೆಳೆಗಳಿಗೆ ಕೂಡಾ ವಿಮಾ ಪ್ರೀಮಿಯಂ ಪಾವತಿಸಲು ರೈತರಿಗೆ ಸೂಚಿಸಿದ್ದು ಪ್ರತೀ ಎಕರೆ ಅಡಿಕೆಗೆ ₹2590 ಆಗಿದ್ದು, ಕರಿಮೆಣಸು ಬೆಳೆಗೆ ₹ 951 ಆಗಿರುತ್ತದೆ. ಜು.30 ನೋಂದಾವಣೆಗೆ ಕೊನೆದಿನವಾಗಿದ್ದು, ಕೃಷಿಕರು ತಮ್ಮ ಹತ್ತಿರದ ಗ್ರಾಮವನ್ ಕೇಂದ್ರಗಳಲ್ಲಿ ಅಥವಾ ಪ್ರಾ.ಕೃ.ಪ ಸ ಸಂಘಗಳನ್ನು ಸಂಪರ್ಕಿಸಬಹುದು.







