ಸಮಗ್ರ ನ್ಯೂಸ್: ಖ್ಯಾತ ತಮಿಳು ನಟ, ಸಂಗೀತ ನಿರ್ದೇಶಕ ವಿಜಯ್ ಆಯಂಟೊನಿ ಅವರ 16ರ ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿರ್ಮಾಪಕರಾಗಿ ಹೆಸರು ಮಾಡಿರುವ ವಿಜಯ್ ಅವರ ಮಗಳು ಮೀರಾ ಚೆನ್ನೈನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.
ಮಂಗಳವಾರ ಮುಂಜಾನೆ ಎದ್ದು ನೋಡುವಾಗ ಚೆನ್ನೈಯ ನಿವಾಸದಲ್ಲಿ ಆಕೆ ನೇಣು ಬಿಗಿದುಕೊಂಡಿದ್ದು ಕಂಡುಬಂತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಯಲಿಲ್ಲ. ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು ಎನ್ನಲಾಗಿದೆ. ಮೀರಾ ಒತ್ತಡ ಮತ್ತು ಖಿನ್ನತೆಯ ಸಮಸ್ಯೆಯಿಂದ ಬಳಲಸುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಚೆನ್ನೈನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಹುಡುಗಿ ಆಟ ಪಾಠಗಳಲ್ಲಿ ಮುಂದಿದ್ದರೂ ಆಕೆಯನ್ನು ಖಿನ್ನತೆ ಕಾಡುತ್ತಿತ್ತು ಎನ್ನಲಾಗಿದೆ. ಇದೇ ಆಕೆಯ ಸಾವಿಗೆ ಕಾರಣವಾಯಿತು ಎನ್ನುವುದು ಪ್ರಾಥಮಿಕ ವರದಿ.
ಕೆಲವು ವರ್ಷಗಳ ಹಿಂದೆ ಫಾತಿಮಾ ಅವರನ್ನು ಮದುವೆಯಾಗಿರುವ ವಿಜಯ್ ಮೀರಾ ಮತ್ತು ಲಾರಾ ಎಂಬಿಬ್ಬರು ಹೆಣ್ಣು ಮಕ್ಕಳು. ಪುಟ್ಟ ಸಂಸಾರ, ದೊಡ್ಡ ಸಾಧನೆಯ ನಡುವೆ ಪ್ರೊಡಕ್ಷನ್ ಹೌಸ್ ಕಟ್ಟಿಕೊಂಡಿದ್ದ ಅವರ ಬದುಕಿನಲ್ಲಿ ಈಗ ದೊಡ್ಡ ಆಘಾತವಾಗಿದೆ.


















