ಸಮಗ್ರ ನ್ಯೂಸ್: ಅದಮಾರಿನ ಪೂರ್ಣಪ್ರಜ್ಞ ಕಾಲೇಜಿನ ಕಾವಲುಗಾರರೊಬ್ಬರು ರಾತ್ರಿ ಕುಂಜೂರು ಗ್ರಾಮದ ಯಶೋದಾ ಮಡಿವಾಳ ಎಂಬವರ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜು. 28 ರಂದು ನಡೆದಿದೆ.
ಎರ್ಮಾಳು ಬಡಾ ನಿವಾಸಿ ನವೀನ್ ಬಂಗೇರಾ (53) ಎಂದು ಗುರುತಿಸಲಾಗಿದೆ. ಯಶೋದಾ ಮನೆಯವರು ಮನೆಯಿಂದ ಹೊರ ಬಂದಾಗ ಬಾವಿಕಟ್ಟೆಯಲ್ಲಿ ಪರ್ಸ್, 100, 50 ಮತ್ತು 500ರ ನೋಟ್‌ಗಳು ಚೆಲ್ಲಿದ್ದು, ಕೆಲವು ನೋಟ್‌ಗಳನ್ನು ಹರಿದು ಎಸೆಯಲಾಗಿತ್ತು. ಈ ವಿಷಯವರಿತು ಸ್ಥಳಕ್ಕೆ ಬಂದಿದ್ದ ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸಿ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿ ಪೊಲೀಸರಿಗೂ ಕರೆ ಮಾಡಿ ತಿಳಿಸಿದ್ದರು.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದಾಗ ಅನತಿ ದೂರದಲ್ಲೇ ನವೀನ್ ಅವರ ಮೊಬೈಲ್ ಕೂಡಾ ಪತ್ತೆಯಾಗಿದೆ. ಸ್ಥಳದಲ್ಲಿದ್ದ ಪರ್ಸನ್ನು ಪೊಲೀಸರು ಪರಿಶೀಲಿಸಿದಾಗ, ಅದರಲ್ಲಿ ನವೀನ್ ಅವರ ಫೊಟೋ ಮತ್ತು ಅದಮಾರು ಸಂಸ್ಥೆಯ ಪತ್ರ ಸಿಕ್ಕಿದ್ದು, ಇದರಿಂದಾಗಿ ನವೀನ್ ಅವರು ಬಾವಿಗೆ ಹಾರಿರಬೇಕೆಂಬ ಶಂಕೆ ದೃಢವಾಗಿದೆ.
ತಕ್ಷಣ ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಹುಡುಕಾಡಿದಾಗ ನವೀನ್ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















