ಇಂದು ರಾಜ್ಯ ಬಜೆಟ್ ಮಂಡನೆ| ಜನಸಾಮಾನ್ಯರ ಕಿಸೆಗೆ ಕತ್ತರಿ ‘ಗ್ಯಾರಂಟಿ’ನಾ?…

ಸಮಗ್ರ ನ್ಯೂಸ್: ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಒತ್ತಡ, ಎತ್ತಿನಹೊಳೆ, ಮೇಕೆದಾಟು, ಕೃಷ್ಣಾ-ಭದ್ರಾ ಮೇಲ್ದಂಡೆ, ಆಲಮಟ್ಟಿಯಂತಹ ಬೃಹತ್‌ ನೀರಾವರಿ ಯೋಜನೆಗಳಿಗೆ ಹಣ ಮೀಸಲಿಡುವ ಅನಿವಾರ್ಯತೆ, ಸಿಬ್ಬಂದಿ ವೇತನ ಹೆಚ್ಚಳ, ರಾಜ್ಯದ ಆರ್ಥಿಕ ಸ್ಥಿತಿಯನ್ನು ಮೇಲೆತ್ತುವಂತಹ ಸಾಲು-ಸಾಲು ಸವಾಲುಗಳ ಒತ್ತಡದ ನಡುವೆ ಇಂದು(ಜು.7) 2023-24ನೇ ಸಾಲಿನ ಬಜೆಟ್‌ ಮಂಡನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಣಿಯಾಗಿದ್ದಾರೆ.

Ad Widget ... ..

ಇಂದು ಮಧ್ಯಾಹ್ನ 12 ಗಂಟೆಗೆ ಮಂಡಿಸಲಿರುವ ಆಯವ್ಯಯದಲ್ಲಿ ಗ್ಯಾರಂಟಿ ಯೋಜನೆಗಳ ಹೊರತಾಗಿ ಯಾವುದೇ ಜನಪ್ರಿಯ ಯೋಜನೆಗಳ ಘೋಷಣೆ ಸಾಧ್ಯತೆ ಕಡಿಮೆಯಿದ್ದರೂ, ಡೆಲಿವರಿ ಬಾಯ್‌ಗಳಂತಹ ಅಸಂಘಟಿತ ಕಾರ್ಮಿಕರಿಗೆ ಬಂಪರ್‌ ಘೋಷಣೆ ಮಾಡುವ ಸಾಧ್ಯತೆಯಿದೆ. ಇನ್ನು, ಗ್ಯಾರಂಟಿ ಹೊರೆ ಸರಿದೂಗಿಸಲು ಶಾಸಕರ ಕ್ಷೇತ್ರಗಳ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕಡಿತವಾಗುವ ಸಂಭವವಿದೆ. ಜತೆಗೆ ವ್ಯಾಪಾರ ಮತ್ತು ಸೇವಾ ತೆರಿಗೆ ಹೆಚ್ಚಳ, ಆಸ್ತಿ ನೋಂದಣಿ ಶುಲ್ಕ ಹೆಚ್ಚಳವೂ ಆಗಬಹುದು. ಜತೆಗೆ ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಸಿದ್ದರಾಮಯ್ಯ ಯತ್ನಿಸಲಿದ್ದಾರೆ.

Ad Widget

ಪರಿಣಾಮ, ಆದಾಯ ಕ್ರೋಢೀಕರಣಕ್ಕೆ ಹೆಚ್ಚು ಒತ್ತು ನೀಡಿ ಲಭ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಅಗತ್ಯ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳಿಗಷ್ಟೇ ಸೀಮಿತವಾಗಿ ಮಿತವ್ಯಯ ಮಾಡುವ ಆಯವ್ಯಯ ಮಂಡಿಸುವುದು ನಿಚ್ಚಳ. 2023-24ನೇ ಸಾಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ 3.09 ಲಕ್ಷ ಕೋಟಿ ರು. ಬಜೆಟ್‌ ಗಾತ್ರವನ್ನು 3.33-3.35 ಲಕ್ಷ ಕೋಟಿಗೆ ಹೆಚ್ಚಳ ಮಾಡುವ ಬಗ್ಗೆ ಸಿದ್ದರಾಮಯ್ಯ ಈಗಾಗಲೇ ಸುಳಿವು ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಇಂದು ಮಂಡಿಸಲಿರುವ ಬಜೆಟ್‌ ಇತಿಹಾಸವನ್ನು ಸೃಷ್ಟಿಸಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಅವರ ಹೆಗಲೇರಲಿದೆ. ಈಗಾಗಲೇ 13 ಬಜೆಟ್‌ ಮಂಡಿಸುವ ಮೂಲಕ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಅವರ ದಾಖಲೆ ಸರಿಗಟ್ಟಿರುವ ಸಿದ್ದರಾಮಯ್ಯ ಶುಕ್ರವಾರ 14ನೇ ಬಜೆಟ್‌ ಮಂಡನೆ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ.

ಸರ್ಕಾರದ ಮೇಲೆ ಎಷ್ಟೇ ಒತ್ತಡ ಹೆಚ್ಚಾದರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾರ್ವಜನಿಕರಿಗೆ ಹೊರೆ ಹೊರಿಸದೆ ಬಜೆಟ್‌ ಮಂಡನೆ ಮಾಡಿದರೆ ಅದು ಸಿದ್ದರಾಮಯ್ಯ ಅವರ ಮತ್ತೊಂದು ದಾಖಲೆಯಾಗಲಿದೆ. ಏಕೆಂದರೆ, ಅನ್ನಭಾಗ್ಯ, ಶಕ್ತಿ, ಗೃಹ ಜ್ಯೋತಿ, ಗೃಹ ಲಕ್ಷ್ಮೇ, ಯುವನಿಧಿ ಸೇರಿ ಐದು ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 60 ಸಾವಿರ ಕೋಟಿ ರು. ಬೇಕಿದೆ. ಈಗಾಗಲೇ 4 ತಿಂಗಳು ಕಳೆದಿರುವುದರಿಂದ ಪ್ರಸಕ್ತ ಸಾಲಿನಲ್ಲಿ 42,000 ಕೋಟಿ ರು. ಬೇಕಿದೆ. ಬೊಮ್ಮಾಯಿ ಅವರ ಬಜೆಟ್‌ಗೆ ಹೋಲಿಸಿದರೆ ಇಷ್ಟುಮೊತ್ತವನ್ನು ಹೆಚ್ಚುವರಿಯಾಗಿ ಹೊಂದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Leave a Comment

Your email address will not be published. Required fields are marked *