ಸಮಗ್ರ ನ್ಯೂಸ್: ಕಳೆದ ೫ ವರ್ಷದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮೂರುವರೆ ಸಾವಿರ ಕೋಟಿ ಅನುದಾನ ತಂದಿದ್ದಾರೆ, ಪುತ್ತೂರಿನ ಅಭಿವೃದ್ಧಿಗೆ ಎರಡೂವರೆ ಸಾವಿರ ಕೋಟಿ ಅನುದಾನ ತರಿಸಲಾಗಿದೆಯೆಂದು ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಕೇವಲ 150 ರಿಂದ 200 ಕೋಟಿ ಮಾತ್ರ ಬಂದಿದೆಯಂತೆ. ಹಾಗಾದರೆ ಇಲ್ಲಿಗೆ ಇದು ಸಾಕೇ? ಸುಳ್ಯ ಕ್ಷೇತ್ರಕ್ಕೆ ಬಿಜೆಪಿ ಶಾಸಕರ, ಸಂಸದರ ಕೊಡುಗೆ ಏನು? ಎಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಪ್ರಶ್ನಿಸಿದ್ದಾರೆ.
ಸುಳ್ಯದ ರೈತರನ್ನು ಕಾಡುತ್ತಿರುವ ಅಡಿಕೆ ಎಲೆ ಹಳದಿ ರೋಗ, ಎಲೆ ಚುಕ್ಕೆ ರೋಗಕ್ಕೆ ಏನು ಪರಿಹಾರ ತಂದಿದ್ದಾರೆ?. ನಳಿನ್ ಕುಮಾರ್ ಕಟೀಲ್ ಅವರು 3 ಬಾರಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದು, ಅವರು ಸುಳ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ. ಬಳ್ಪ ಆದರ್ಶ ಗ್ರಾಮದಲ್ಲಿ ಯಾವುದು ಆದರ್ಶವಾಗಿದೆ ಎಂದು ಕಿಡಿ ಕಾರಿದರು.
ಸುಳ್ಯದವರಾದ ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ ಸುಳ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಡಿ.ವಿ.ಯವರು ಮುಖ್ಯಮಂತ್ರಿಯಾಗಿದ್ದರೂ ಕೂಡ ಅವರ ದೇವರಗುಂಡದಿಂದ ಮಂಡೆಕೋಲು ಗ್ರಾಮ ಪಂಚಾಯತ್‌ಗೆ ಹೋಗುವ ರಸ್ತೆ ವ್ಯವಸ್ಥೆಯೇ ಸರಿ ಇಲ್ಲ ಎಂದು ಅಡ್ಪಂಗಾಯರು ಟೀಕಾಪ್ರಹಾರ ಮಾಡಿದರು. ಶೋಭಾ ಕರಂದ್ಲಾಜೆಯವರು ಹಿಂದೆ ವಿದ್ಯುತ್ ಮಂತ್ರಿಯಾಗಿದ್ದರು. ಆಗ ಯಾಕೆ ಸುಳ್ಯಕ್ಕೆ 110 ಕೆ.ವಿ. ತರಿಸಲು ಅವರು ಪ್ರಯತ್ನ ಮಾಡಲಿಲ್ಲ ಎಂದು ಗುಡುಗಿದರು.
ಸುಳ್ಯ ಅಭಿವೃದ್ಧಿ ವಿಷಯದಲ್ಲಿ ತೀರಾ ಹಿಂದೆ ಬಿದ್ದಿದೆ. ಹೀಗಾಗಿ ಸುಳ್ಯದ ರಸ್ತೆ, ಸೇತುವೆಗಳನ್ನು ಆದ್ಯತೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ನಮ್ಮ ಅಭ್ಯರ್ಥಿ ಅಷ್ಟು ಸಮರ್ಥರಿದ್ದು, ನಾವು ಭರವಸೆ ನೀಡದೇ ಕೆಲಸದ ಮೂಲಕ ಉತ್ತರ ಕೊಡಲಿದ್ದೇವೆ ಎಂದರು. ಇನ್ನು ಸುಳ್ಯದಲ್ಲಿ ಮೂಲಭೂತ ಸೌಕರ್ಯಗಳ ಕೊರೆತೆ ಇದೆ. ಅನೇಕ ಕಡೆ ಮತದಾನದ ಬಹಿಷ್ಕಾರದ ಬ್ಯಾನರ್ ಗಳನ್ನು ಹಾಕಲಾಗಿದೆ. ಯಾರೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೋ ಅವರ ಬಳಿ ತೆರಳಿ ಕುಂದುಕೊರತೆಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಕೆಲಸ ಮಾಡುತ್ತೇವೆ ಎಂದರು. ನಾನು ಅಂಗಾರರು ಬಗ್ಗೆ ಏನು ಹೇಳಲಾರೆ. ಆದರೆ ಬೆಳ್ತಂಗಡಿ, ಪುತ್ತೂರಿಗೆ ಅನುದಾನ ಬರಲು ಈ ಮೂವರು ನಾಯಕರು ಅಲ್ಲಿಯವರಿಗೆ ಶಕ್ತಿ ತುಂಬಿದ್ದರೆ, ಅಂಗಾರರಿಗೆ ಯಾಕೆ ಶಕ್ತಿ ತುಂಬಿಲ್ಲವೆನ್ನುವುದೇ ದೊಡ್ಡ ಪ್ರಶ್ನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.






