ಸಮಗ್ರ ನ್ಯೂಸ್: ಬಿಗ್ಬಾಸ್ ಸೀಸನ್ 4ರ ರನ್ನರ್, ಪತ್ರಕರ್ತ, ನಿರೂಪಕ, ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೆಸರು ಮಾಡಿದ್ದ ಕಿರಿಕ್ ಕೀರ್ತಿ, ನಾನು ಈ ಜಗತ್ತಿಗೆ ಶಾಶ್ವತ ವಿದಾಯ ಹೇಳಬೇಕೆಂದು ನಿರ್ಧಾರ ಮಾಡಿ ಬಿಟ್ಟಿದ್ದೆ ಹೇಳಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗನೊಂದಿಗಿರುವ ಫೋಟೋವೊಂದನ್ನು ಹಂಚಿಕೊಂಡು, ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಗ್ಗಿಸಿಬಿಟ್ಟಿತ್ತು. ಇದರಿಂದ ಜೀವನದ ಮೇಲೆ ಕೆಟ್ಟ ನಿರಾಸಕ್ತಿ ಮೂಡಿತ್ತು ಎಂದು ಕಿರಿಕ್ ಕೀರ್ತಿ ಬರೆದುಕೊಂಡಿದ್ದಾರೆ.
ನಾನು ಎಷ್ಟೇ ಪ್ರಯತ್ನ ಮಾಡಿದರೂ ಯಾವುದೂ ಕೈ ಹಿಡಿಯುತ್ತಿರಲಿಲ್ಲ. ಇದರ ನಡುವೆ ಕೆಲ ಜಿಹಾದಿ ಮನಸ್ಥಿಗಳ ನಿರಂತರ ಬೆದರಿಕೆಗೆ ಒಳಗಾಗಿದ್ದೆ. ಇದು ನನ್ನ ಕುಟುಂಬ ಸಾಕಷ್ಟು ಚಿಂತೆಗೀಡಾಗುವಂತೆ ಮಾಡಿತ್ತು. ಹೀಗಾಗಿ ಸಾಮಾಜಿಕ ಜಾಲತಾಣದಿಂದ ದೂರ ಉಳಿದು ಬಿಟ್ಟೆ.
ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ಹೆದರಿ ಜೀವವನ್ನೇ ಕಳೆದುಕೊಂಡರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಕೊಡುವುದು ಹೇಗೆ? ನನ್ನನ್ನು ನಂಬಿ ಬಂಡವಾಳ ಹಾಕಿರುವವರಿಗೆ ನ್ಯಾಯ ಸಿಗುವುದಾದರೂ ಹೇಗೆ? ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮಗನ ಭವಿಷ್ಯ ಕಟ್ಟುವುದು ಹೇಗೆ? ಇಂತಹ ಪ್ರಶ್ನೆಗಳು ನನ್ನನ್ನು ಬಲವಾಗಿ ಕಾಡುತ್ತಿದ್ದಂತೆ ಬರೆದಿಟ್ಟಿದ್ದ ಡೆಟ್ನೋಟ್ನ್ನು ಅಳಿಸಿಬಿಟ್ಟೆ ಎಂದು ಕಿರಿಕ್ ಕೀರ್ತಿ ಹೇಳಿಕೊಂಡಿದ್ದಾರೆ.
ಧನಾತ್ಮಕ ಯೋಚನೆಗಳು ಬರುತ್ತಿದ್ದಂತೆ 10 ನಿಮಿಷಗಳ ಕಾಲ ಧ್ಯಾನ ಮಾಡಿದೆ. ನನ್ನನ್ನು ನಂಬಿ ಇಟ್ಟಂತಹ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ಸಾಧನೆ ಮಾಡಬೇಕು ಎಂದು ಬಲವಾದ ನಿರ್ಧಾರ ಮಾಡಿದೆ. ಮನಸ್ಸಲ್ಲಿದ್ದ ಕೆಟ್ಟ ಆಲೋಚನೆಗಳನ್ನು ಇದೀಗ ಕಿತ್ತು ಹಾಕಿದ್ದೇನೆ. ಈ ಸಂದರ್ಭದಲ್ಲಿ ಕೆಲವರನ್ನು ಕಳೆದುಕೊಂಡಿದ್ದರ ಹೊರತು, ಬೇರೆ ಎಲ್ಲವನ್ನೂ ಮತ್ತೆ ಹಳಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.
ನಿಮ್ಮೆಲ್ಲರ ಬೆಂಬಲ ಸದಾ ನನ್ನ ಜೊತೆಗಿರಲಿ. ಖಿನ್ನತೆಯಿಂದ ಮರಳಲು ಸಹಕರಿಸಿ. ನನ್ನ ಮುಖದ ಮೇಲಿನ ನಗು ಮತ್ತೆ ಮರಳುವ ತನಕ ಪ್ರಯತ್ನ ನಿರಂತರ. ಇದು ಹೇಳಿಕೊಳ್ಳಬಾರದ ಖಾಸಗಿ ವಿಷಯ. ಆದ್ರೆ ಹೇಳಿಕೊಂಡರಷ್ಟೆ ಸಮಾಧಾನ ಎಂದು ಕಿರಿಕ್ ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.






