ಸಮಗ್ರ ನ್ಯೂಸ್: ಯುವಕನೋರ್ವನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದ ಘಟನೆ ಸುಳ್ಯದಲ್ಲಿ ನಡೆದಿದೆ. ಇಲ್ಲಿನ ವೆಂಕಟರಮಣ ಸೊಸೈಟಿಯ ಬಳಿ ಭಾನುವಾರ ರಾತ್ರಿ ಈ ಗುಂಡಿನ ದಾಳಿ ನಡೆದಿದೆ. ಆದರೆ ಗುಂಡು ಗುರಿ ತಪ್ಪಿ ಕಾರಿಗೆ ತಾಗಿದ ಹಿನ್ನೆಲೆಯಲ್ಲಿ ಯುವಕ ಅಪಾಯದಿಂದ ಪಾರಾಗಿದ್ದಾನೆ.
ಸುಳ್ಯದ ಮೊಗರ್ಪಣೆ ಯಲ್ಲಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬಳಿ ಜಯನಗರದ ಶಾಯಿ ಎಂಬವರು ತನ್ನ ಕ್ರೆಟ್ಟಾ ಕಾರನ್ನು ನಿಲ್ಲಿಸಿ ತನ್ನ ತಂಗಿಯ ಮನೆಗೆ ಹೋಗಿದ್ದರು. ಅಲ್ಲಿಂದ ಹಿಂತಿರುಗಿ ಅವರು ತನ್ನ ಕಾರನ್ನು ಏರುತ್ತಿರುವ ಸಂದರ್ಭ ಹಿಂದಿನಿಂದ ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಶಾಯಿಯವರ ಕಡೆಗೆ ಗುಂಡು ಹಾರಿಸಿದರು.

ಗುಂಡು ಅದೃಷ್ಟವಶಾತ್ ಶಾಯಿಗೆ ಆಗದೆ ಅವರ ಕಾರಿಗೆ ತಾಗಿ ಕಾರು ಜಖಂಗೊಂಡಿದೆ. ದಾಳಿಯಲ್ಲಿ ಶಾಯಿಯವರ ಹೊಟ್ಟೆಯ ಸಮೀಪಕ್ಕೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಗಾಯಾಳು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡು ಹಾರಿಸಿದ ದುಷ್ಕರ್ಮಿಗಳ ವಾಹನ ಪತ್ತೆಯಾಗಿಲ್ಲ. ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.






