ಹಾಸನ: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಕಾರಣ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾದ ಘಟನೆ ಮುತ್ತಿಗೆ ಗೇಟ್ ಬಳಿ ನಡೆದಿದೆ.
ಚಾಲಕನನ್ನು ಬಾಬು ಎಂದು ಗುರುತಿಸಲಾಗಿದೆ. ಈತ ಅರಕಲಗೂಡು ತಾಲೂಕಿನ ಮುತ್ತಿಗೆ ಗೇಟ್ ಬಳಿ ಕಾರು ಚಲಾಯಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು,ಇದಕ್ಕೆ ಕಾರಣ ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದೇ ವೇಳೆ ಅಪಘಾತ ನಂತರ ಸ್ಥಳಕ್ಕೆ ಬಂದ ಪೊಲೀಸರ ವಿರುದ್ಧ ಅನವಶ್ಯಕವಾಗಿ ಹರಿಹಾಯ್ದಿರುವ ಚಾಲಕ ಬಾಬು, ಪೊಲೀಸರ ಎದುರು ಕೂಗಾಡುತ್ತಾ ನಾನು ರಕ್ಷಣಾ ವೇದಿಕೆಯ ಕಾರ್ಯಕರ್ತ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾನೆ.
ಪೊಲೀಸರ ಎದುರೇ ಬಟ್ಟೆ ಹರಿದುಕೊಂಡು ಹೈಡ್ರಾಮಾ ಮಾಡಿರುವ ಬಾಬು ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಅಪಘಾತ ಪ್ರಕರಣವನ್ನು ದಾಖಲು ಮಾಡಲಾಗಿದೆ.ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.



























