ನವದೆಹಲಿ(ಜು.07): ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ವಿಸ್ತರಣೆ/ ಪುನಾರಚನೆ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ನಿಗದಿಯಾಗಿದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ಮತ್ತು ಎನ್‌ಡಿಎ ಮಿತ್ರಪಕ್ಷಗಳ ಸಂಸದರಿಗೆ ಕೇಂದ್ರದ ಬಿಜೆಪಿ ನಾಯಕರಿಂದ ಕರೆ ಬಂದಿದ್ದು, ಅವರೆಲ್ಲಾ ಮಂಗಳವಾರವೇ ದೆಹಲಿಗೆ ದೌಡಾಯಿಸಿದ್ದಾರೆ. ಇದು 2019ರಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಮೊದಲ ಸಂಪುಟ ಬದಲಾವಣೆ ಪ್ರಕ್ರಿಯೆಯಾಗಲಿದೆ.
ಕೇಂದ್ರ ಸಂಪುಟದಲ್ಲಿ 81 ಜನರಿಗೆ ಅವಕಾಶವಿದ್ದು, ಹಾಲಿ 52 ಜನರಿಗೆ ಮಾತ್ರ ಅವಕಾಶ ಸಿಕ್ಕಿದೆ. ಜೊತೆಗೆ ಬುಧವಾರ ಪ್ರಕ್ರಿಯೆಯಲ್ಲಿ ಕೆಲ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಹೀಗಾಗಿ ಅದರಿಂದಲೂ ಸೃಷ್ಟಿಯಾಗುವ ಸ್ಥಾನಗಳನ್ನು ಸೇರಿಸಿ ಕನಿಷ್ಠ 25 ಜನರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ನೀಡಲಾಗುವುದು.
ಈ ಬಾರಿ ಯುವಕರು, ತಾಂತ್ರಿಕ, ವಿಷಯವಾರು ಪರಿಣತಿ ಹೊಂದಿರುವವರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ. ಯುಪಿ ಸೇರಿದಂತೆ ಶೀಘ್ರ ಚುನಾವಣೆ ನಡೆಯಲಿರುವ ರಾಜ್ಯಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು. ಮಹಿಳೆಯರಿಗೂ ಇನ್ನಷ್ಟುಸ್ಥಾನ ಸಿಗಲಿದೆ. ಅಲ್ಲದೆ ಜಾತಿ ಲೆಕ್ಕಾಚಾರವನ್ನೂ ಪರಿಗಣಿಸಿ ವಿಸ್ತರಣೆ, ಪುನಾರಚನೆ ನಡೆಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿಯ ವಿಸ್ತರಣೆಯಲ್ಲಿ ಕರ್ನಾಟಕಕ್ಕೆ 2-3 ಸ್ಥಾನದ ನಿರೀಕ್ಷೆ ಇದೆ.
ಸಂಭಾವ್ಯ ಸಚಿವರು
- ಜ್ಯೋತಿರಾದಿತ್ಯ ಸಿಂಧಿಯಾ
- ಸರಬಾನಂದ ಸೋನೊವಾಲ್
- ಸುಶೀಲ್ ಮೋದಿ
- ಜಿ.ವಿ.ಎಲ್. ನರಸಿಂಹರಾವ್
- ಸುಧಾಂಶು ತ್ರಿವೇದಿ
- ಭೂಪೇಂದರ್ ಯಾದವ್
- ಅನಿಲ್ ಬುಲಾನಿ
- ಅನುಪ್ರಿಯಾ ಪಟೇಲ್
- ವರುಣ್ ಗಾಂಧಿ
- ನಾರಾಯಣ ರಾಣೆ
- ಪಂಕಜ್ ಚೌಧರಿ
- ರೀಟಾ ಬಹುಗುಣ ಜೋಶಿ
- ಆರ್‌ಸಿಪಿ ಸಿನ್ಹಾ
- ಲಲ್ಲನ್ ಸಿಂಗ್
- ಬೈಜಯಂತ ‘ಜೈ’ ಪಾಂಡಾ
- ರಾಮಶಂಕರ ಕಠೇರಿಯಾ
- ಪಶುಪತಿ ಪಾರಸ್
ಕರ್ನಾಟಕದಿಂದ ಯಾರಿಗೆ ಸ್ಥಾನ?
- ದಲಿತ ಸಂಸದರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನಿಚ್ಚಳವಾಗಿದ್ದು ನಾರಾಯಣಸ್ವಾಮಿಗೆ ಅವಕಾಶ ಸಾಧ್ಯತೆ ಇದೆ. ಈ ನಡುವೆ ಉಮೇಶ್ ಜಾಧವ್, ಜಿಗಜಿಣಗಿ ಹೆಸರೂ ಪ್ರಸ್ತಾಪವಾಗಿದೆ. ಸುರೇಶ್ ಅಂಗಡಿಯಿಂದ ತೆರವಾದ ಲಿಂಗಾಯತ ಸ್ಥಾನ ಯಾರಿಗೆ ಎಂಬ ಕುತೂಹಲ ಮೂಡಿದ್ದು, ಗದ್ದಿಗೌಡರ್, ಉದಾಸಿ, ಖೂಬಾ ಹೆಸರು ಕೇಳಿಬರುತ್ತಿದೆ. ಸಚಿವ ಡಿವಿಎಸ್ ಕೈಬಿಟ್ಟರೆ ಶೋಭಾ ಅಥವಾ ಪ್ರತಾಪ್ ಸಿಂಹಗೂ ಮನ್ನಣೆ ಸಿಗುವ ಸಾಧ್ಯತೆ ಇದೆ. ಈ ನಡುವೆ ಬಿಎಸ್‌ವೈ ಪುತ್ರ ಬಿ.ವೈ.ರಾಘವೇಂದ್ರಗೆ ಸಚಿವ ಸ್ಥಾನ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.







