ಸಮಗ್ರ ನ್ಯೂಸ್: ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ನವೆಂಬರ್ ತಿಂಗಳು ಸಂತಸದ ಸುದ್ದಿಯನ್ನು ನೀಡುತ್ತಿದೆ. ತಿಂಗಳ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ನಿರಂತರ ಏರಿಳಿತದ ನಡುವೆ ಇದೀಗ ಭಾರೀ ಇಳಿಕೆ ಕಂಡುಬಂದಿದ್ದು, ಮದುವೆ, ಶುಭಕಾರ್ಯಕ್ಕೆ ಬಂಗಾರ ಖರೀದಿದಾರರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯ ಪರಿಣಾಮ ಬೆಂಗಳೂರಿನಲ್ಲಿಯೂ ಚಿನ್ನ ಮತ್ತು ಬೆಳ್ಳಿ ದರಗಳು ಕೆಳಮುಖವಾಗಿವೆ. ಮದುವೆ, ಶುಭ ಸಮಾರಂಭಗಳಿಗೆ ಚಿನ್ನಾಭರಣ ಖರೀದಿಸಲು ಯೋಜಿಸುತ್ತಿರುವವರು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಲು ಕಾಯುತ್ತಿರುವವರಿಗೆ ಈ ಬೆಲೆ ಇಳಿಕೆ ಅನುಕೂಲಕರವಾಗಿದೆ. ನವೆಂಬರ್ 5ರಂದು ಪ್ರತಿ ಗ್ರಾಂ ಚಿನ್ನದ ಬೆಲೆ ಗರಿಷ್ಠ 13,385 ರೂಪಾಯಿ ತಲುಪಿತ್ತು. ಆದರೆ, ನವೆಂಬರ್ 19ರಂದು ಪ್ರತಿ ಗ್ರಾಂ ಚಿನ್ನದ ಬೆಲೆ 11,980 ರೂಪಾಯಿಗೆ ಇಳಿದಿದೆ. ಗರಿಷ್ಠ ದರದಿಂದ ಇದೀಗ ಕನಿಷ್ಠ ಮಟ್ಟಕ್ಕೆ ಬಂದಿರುವುದು ಚಿನ್ನದ ಖರೀದಿದಾರರ ಗಮನ ಸೆಳೆದಿದೆ.
ಇಂದು ಬೆಂಗಳೂರಿನ ಮಾರುಕಟ್ಟೆಯಲ್ಲಿ ವಿವಿಧ ಕ್ಯಾರೆಟ್ ಚಿನ್ನದ ಬೆಲೆಗಳಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 235 ರೂಪಾಯಿ ಇಳಿಕೆಯಾಗಿದ್ದು, 11,980 ರೂಪಾಯಿಗೆ ತಲುಪಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 2,350 ರೂಪಾಯಿ ಇಳಿಕೆಯಾಗಿದ್ದು, 1,19,800 ರೂಪಾಯಿಗೆ ಮಾರಾಟವಾಗುತ್ತಿದೆ.
24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 257 ರೂಪಾಯಿ ಇಳಿಕೆಯಾಗಿದ್ದು, 13,069 ರೂಪಾಯಿ ದಾಖಲಾಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 2,570 ರೂಪಾಯಿ ಕುಸಿತ ಕಂಡಿದ್ದು, 1,30,690 ರೂಪಾಯಿಗೆ ತಲುಪಿದೆ.
ನವೆಂಬರ್ ತಿಂಗಳಿನಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿರುವುದು ಆಭರಣ ಖರೀದಿದಾರರಿಗೆ ಉತ್ತಮ ಅವಕಾಶದಂತೆ ಕಾಣುತ್ತಿದೆ. ಆದರೆ, ಚಿನ್ನದ ಬೆಲೆ ಜಾಗತಿಕ ಮಾರುಕಟ್ಟೆ, ಡಾಲರ್ ಮೌಲ್ಯ, ಹೂಡಿಕೆದಾರರ ಬೇಡಿಕೆ ಸೇರಿದಂತೆ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ದರ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.









