ಸಮಗ್ರ ನ್ಯೂಸ್: ಮಂಗಳೂರು-ಬೆಂಗಳೂರು ರೈಲು ಮಾರ್ಗದ ದ್ವಿಪಥ (ಡಬ್ಲಿಂಗ್) ಕಾಮಗಾರಿಗೆ ‘ರಾಷ್ಟ್ರೀಯ ಯೋಜನೆ'(ನ್ಯಾಷನಲ್ ಪ್ರಾಜೆಕ್ಟ್)ಯಾಗಿ ಆದ್ಯತೆ ನೀಡಿ, ಕಾರ್ಯಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ ಮನವಿ ಮೇರೆಗೆ ಈ ವಿಚಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲೇ ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಕೇಂದ್ರ ಸಚಿವರು ಸಭೆ ನಡೆಸಿ ಸಲಹೆ ಸೂಚನೆ ನೀಡಿದ್ದಾರೆ.
ಮಂಗಳೂರು-ಬೆಂಗಳೂರು ನಡುವೆ ಪ್ರಸ್ತುತ ಏಕ-ಹಳಿ ವ್ಯವಸ್ಥೆಯಿಂದಾಗಿ ರೈಲುಗಳ ಸಂಚಾರ ಸಾಮರ್ಥ್ಯ, ಹೆಚ್ಚುವರಿ ರೈಲುಗಳ ಕಾರ್ಯಾಚರಣೆ, ಸಮಯ ನಿರ್ವಹಣೆ ಹಾಗೂ ಸರಕು ಸಾಗಣೆಯಲ್ಲಿ ಹಲವು ಮಿತಿಗಳಿವೆ. ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಪ್ರದೇಶದ ಕಠಿಣ ಭೌಗೋಳಿಕ ಪರಿಸ್ಥಿತಿ ಡಬ್ಲಿಂಗ್ ಕಾಮಗಾರಿಗೆ ದೊಡ್ಡ ಸವಾಲಾಗಿದೆ.
ಈ ಹಿನ್ನೆಲೆಯಲ್ಲಿ ಎರಡನೇ ಹಳಿಗೆ ಸೂಕ್ತವಾದ ಹೊಸ ವಿನ್ಯಾಸ ರೂಪಿಸುವ ಅಗತ್ಯವಿದೆ. ಈ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದು, ವಿವರವಾದ ಯೋಜನಾ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಘಾಟ್ ಪ್ರದೇಶದ ಇಳಿಜಾರಿನ ಸಮಸ್ಯೆ ಗಮನದಲ್ಲಿಟ್ಟುಕೊಂಡು ಹೆಚ್ಚು ಅನುಕೂಲಕರವಾದ ಗ್ರೇಡಿಯಂಟ್‌ನೊಂದಿಗೆ ಎರಡನೇ ಹಳಿ ನಿರ್ಮಿಸುವ ಯೋಜನೆಯನ್ನೂ ರೈಲ್ವೆ ಇಲಾಖೆ ಪರಿಗಣಿಸಿದೆ. ಜನವರಿ ಅಂತ್ಯದ ವೇಳೆಗೆ ಡಿಪಿಆರ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಡಬ್ಲಿಂಗ್ ಯೋಜನೆ ಪೂರ್ಣಗೊಂಡಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಅವಕಾಶ ಸಿಗಲಿದೆ. ಪ್ರಯಾಣಿಕರ ಸಂಚಾರದ ಜೊತೆಗೆ ನವ ಮಂಗಳೂರು ಬಂದರಿನಿಂದ ರಾಜ್ಯದ ಒಳನಾಡು ಹಾಗೂ ರಾಜಧಾನಿ ಭಾಗಗಳಿಗೆ ಸರಕು ಸಾಗಣೆಯೂ ಹೆಚ್ಚು ಸುಗಮವಾಗಲಿದೆ.









