Samagra News: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಬಹುಚರ್ಚಿತ ‘ಸ್ಟಿಂಗ್ ಆಪರೇಷನ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ಗೃಹ ಕಚೇರಿಯಲ್ಲಿ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಮಹಜರ್ ಪ್ರಕ್ರಿಯೆ ನಡೆಸಿದ್ದಾರೆ.
ಸ್ಟಿಂಗ್ ಆಪರೇಷನ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇರೆಗೆ ಇತ್ತೀಚೆಗೆ ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆತ ನೀಡಿದ ಸ್ಫೋಟಕ ಮಾಹಿತಿ ಹಾಗೂ ಹೇಳಿಕೆಗಳನ್ನಾಧರಿಸಿ, ಪೊಲೀಸರು ಕುಮಾರಸ್ವಾಮಿ ಅವರ ದೆಹಲಿ ನಿವಾಸಕ್ಕೆ ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ರಿತೇಶ್ ಪಾಂಡೆ, ಕುಮಾರಸ್ವಾಮಿ ಅವರ ದೆಹಲಿ ಗೃಹ ಕಚೇರಿಯ ಸೋಶಿಯಲ್ ಮೀಡಿಯಾ ವಿಭಾಗದಲ್ಲಿ ತಿಂಗಳಿಗೆ ₹50,000 ವೇತನಕ್ಕೆ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿದ್ದ. ತನಿಖೆ ವೇಳೆ ಲಭ್ಯವಾದ ಮಾಹಿತಿಯಂತೆ, ಪ್ರಜ್ವಲ್ ಪ್ರಸಾದ್ ಎಂಬಾತ ನೀಡಿದ್ದ ₹30,000 ಹಣದಲ್ಲಿ ರಿತೇಶ್ ದೆಹಲಿಯ ಕರೋಲ್‌ಬಾಗ್‌ನಲ್ಲಿ ತಲಾ ₹15,000 ಮೌಲ್ಯದ ಎರಡು ಹೊಸ ಮೊಬೈಲ್‌ಗಳನ್ನು ಖರೀದಿಸಿದ್ದ. ಈ ಮೊಬೈಲ್‌ಗಳನ್ನು ಬಳಸಿಕೊಂಡೇ ಸ್ಟಿಂಗ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿತ್ತು ಮತ್ತು ತನ್ನ ಸ್ವಂತ ಫೇಸ್‌ಬುಕ್ ಖಾತೆಯಲ್ಲೂ ಹಂಚಿಕೊಂಡಿದ್ದ ಎಂದು ಹೇಳಲಾಗಿದೆ.









