ಸಮಗ್ರ ನ್ಯೂಸ್: ಹಾಂಗ್ ಕಾಂಗ್ ಸಿಕ್ಸಸ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ತಲಾ ಆರು ಓವರ್ಗಳ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 88 ರನ್ ಗಳಿಸಿತು. 89 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 23 ಎಸೆತಗಳಲ್ಲಿ 4 ವಿಕೆಟ್ಗಳ ಜಯ ಸಾಧಿಸಿದೆ.
ಪಾಕಿಸ್ತಾನದ ನಾಯಕ ಅಬ್ಬಾಸ್ ಅಫ್ರಿದಿ ಹಾಗೂ ಖವಾಜಾ ನಫೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಭಾರತದ ಬೌಲರ್ಗಳನ್ನು ಕಂಗೆಡಿಸಿದರು. ವಿಶೇಷವಾಗಿ ನಾಯಕ ಕೃನಾಲ್ ಪಾಂಡ್ಯ ಎಸೆದ ಮೊದಲ ಓವರ್ನಲ್ಲಿ ಅಬ್ಬಾಸ್ ಅಫ್ರಿದಿ ಸತತ ಐದು ಸಿಕ್ಸರ್ಗಳನ್ನು ಸಿಡಿಸಿದ್ದು ಪಂದ್ಯದ ಪ್ರಮುಖ ಆಕರ್ಷಣೆಯಾಗಿತ್ತು.
ಟಾಸ್ ಬಳಿಕ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಿತೀಶ್ ರಾಣಾ 14 ಎಸೆತಗಳಲ್ಲಿ 19 ರನ್ ಗಳಿಸಿದರು.
ಆದರೆ ಶಶಾಂಕ್ ಸಿಂಗ್ ಮಾತ್ರ ಪಾಕಿಸ್ತಾನದ ಬೌಲರ್ಗಳ ವಿರುದ್ಧ ಅಬ್ಬರಿಸಿದರು. ಕೇವಲ 11 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 40 ರನ್ ಸಿಡಿಸಿ ಗಮನ ಸೆಳೆದರು.
ಇತ್ತ ಭಾರತದ ನಾಯಕ ಕೃನಾಲ್ ಪಾಂಡ್ಯ ಮೊದಲ ಎಸೆತದಲ್ಲೇ ಔಟಾದರೆ, ರಾಹುಲ್ ತೆವಾಟಿಯಾ ಕೂಡ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದರು. ನಟರಾಜನ್ 6 ಎಸೆತಗಳಲ್ಲಿ 12 ರನ್ ಗಳಿಸಿ ಅಜೇಯರಾಗಿ ಉಳಿದರು. ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಬರದ ಹಿನ್ನೆಲೆಯಲ್ಲಿ ಭಾರತ ತಂಡ 88 ರನ್ಗಳಿಗೆ ತೃಪ್ತಿಪಡಬೇಕಾಯಿತು.
ಅಬ್ಬಾಸ್ ಅಫ್ರಿದಿ ಜೊತೆಗೆ ಖವಾಜಾ ನಫೆ ಕೂಡ ಭಾರತದ ಬೌಲರ್ಗಳ ವಿರುದ್ಧ ಅಬ್ಬರಿಸಿದರು. ಕೇವಲ 12 ಎಸೆತಗಳನ್ನು ಎದುರಿಸಿದ ನಫೆ 41 ರನ್ ಗಳಿಸಿ ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ನಂತರ ಅಬ್ದುಲ್ ಸಮದ್ 7 ರನ್ ಗಳಿಸಿ ಅಜೇಯರಾಗಿ ಉಳಿದರು. ಇರ್ಫಾನ್ ಖಾನ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಪಾಕಿಸ್ತಾನದ ಗೆಲುವನ್ನು ಖಚಿತಪಡಿಸಿದರು. ಈ ಮೂಲಕ ಪಾಕಿಸ್ತಾನ ಕೇವಲ 3.5 ಓವರ್ಗಳಲ್ಲಿ 89 ರನ್ಗಳ ಗುರಿ ತಲುಪಿ 4 ವಿಕೆಟ್ಗಳ ಗೆಲುವು ಸಾಧಿಸಿತು.









