ದೇಶವಾಸಿಗಳಿಗೆ ಮತ್ತೆ ಬೆಲೆ ಏರಿಕೆ ಶಾಕ್| ಸಕ್ಕರೆ, ಅಕ್ಕಿ, ಎಣ್ಣೆ ಸೇರಿ ಹಲವು ಅಗತ್ಯ ವಸ್ತುಗಳು ದುಬಾರಿ

ಸಮಗ್ರ ನ್ಯೂಸ್: ದೇಶಾದ್ಯಂತ ದಸರಾ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮದ ವಾತಾವರಣ ಕಳೆಗಟ್ಟುತ್ತಿರುವ ಬೆನ್ನಲ್ಲೇ, ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಡುಗೆ ಎಣ್ಣೆ, ಅಕ್ಕಿ ಹಾಗೂ ಸಕ್ಕರೆ ಸೇರಿದಂತೆ ಹಬ್ಬದಡುಗೆಗೆ ಅತಿ ಅಗತ್ಯವಾಗಿ ಬೇಕಾಗುವ ಪ್ರಮುಖ ದಿನಸಿ ಪದಾರ್ಥಗಳ ದರ ಗಣನೀಯವಾಗಿ ಏರಿಕೆಯಾಗಿದೆ.

. Ad Widget . Ad Widget . Ad Widget

ಹಬ್ಬದ ದಿನಗಳಲ್ಲಿ ಹೆಚ್ಚುವ ಬೇಡಿಕೆಯೊಂದಿಗೆ ಹವಾಮಾನ ವೈಪರೀತ್ಯ, ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳು ಹಾಗೂ ಪೂರೈಕೆ ಶೃಂಖಲೆಯಲ್ಲಿ ಉಂಟಾಗಿರುವ ವ್ಯತ್ಯಯಗಳು ಈ ಬೆಲೆ ಏರಿಕೆಗೆ ಮುಖ್ಯ ಕಾರಣಗಳಾಗಿದ್ದು, ಸಾಮಾನ್ಯ ಗೃಹಿಣಿಯರ ಮಾಸಿಕ ಬಜೆಟ್ ಅನ್ನು ತಲೆಕೆಳಗಾಗಿಸಿವೆ.

. Ad Widget .

ಪ್ರಮುಖ ಆಹಾರ ಧಾನ್ಯವಾದ ಅಕ್ಕಿಯ ಬೆಲೆಯು ಮುಂಗಾರು ಮಳೆಯ ಕೊರತೆ ಹಾಗೂ ಎಲ್ ನಿನೋ ಪ್ರಭಾವದಿಂದಾಗಿ ಬೆಳೆ ಉತ್ಪಾದನೆ ಕುಸಿದ ಪರಿಣಾಮ ಹೆಚ್ಚಾಗಿದೆ. ಮತ್ತೊಂದೆಡೆ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಾದ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇಳುವರಿ ತಗ್ಗಿರುವುದು ಹಾಗೂ ಎಥೆನಾಲ್ ಉತ್ಪಾದನೆಗೆ ಕಬ್ಬಿನ ಬಳಕೆಯಾಗುತ್ತಿರುವುದು ಸಕ್ಕರೆ ಕೊರತೆಗೆ ಕಾರಣವಾಗಿದೆ. ಜೊತೆಗೆ ಜಾಗತಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ಸೂರ್ಯಕಾಂತಿ, ಪಾಮ್ ಆಯಿಲ್ ಮತ್ತು ಸೋಯಾಬೀನ್ ಅಡುಗೆ ಎಣ್ಣೆಗಳ ದರ ಅಂತರರಾಷ್ಟ್ರೀಯ ಮಟ್ಟದಲ್ಲೇ ಏರಿಕೆಯಾಗಿದ್ದು, ಭಾರತೀಯ ಮಾರುಕಟ್ಟೆಯ ಮೇಲೆಯೂ ನೇರ ಪರಿಣಾಮ ಬೀರಿದೆ.

ದಿನಸಿ ಪದಾರ್ಥಗಳು ಮಾತ್ರವಲ್ಲದೆ, ಅಡುಗೆಮನೆಯ ದೈನಂದಿನ ತರಕಾರಿಗಳು ಕೂಡ ಗಣನೀಯವಾಗಿ ದುಬಾರಿಯಾಗಿವೆ. ಈರುಳ್ಳಿ ಬೆಲೆ ಪ್ರತಿ ಕೆಜಿಗೆ 50 ರಿಂದ 57 ರೂಪಾಯಿ ಇದ್ದದ್ದು, ಈಗ ಹೊಸ ಬೆಳೆ ಮಾರುಕಟ್ಟೆಗೆ ಬರುವುದು ತಡವಾಗಿರುವುದರಿಂದ 60 ರಿಂದ 67 ರೂಪಾಯಿಗೆ ಏರಿಕೆಯಾಗಿದೆ. ಇದಲ್ಲದೆ ಶುಂಠಿ ಮತ್ತು ಬೆಳ್ಳುಳ್ಳಿಯ ಬೆಲೆಗಳು ಗಗನಕ್ಕೇರಿದ್ದರೆ, ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಕಡಲೆ ಮತ್ತು ಹೆಸರು ಬೇಳೆಯಂತಹ ಪ್ರಮುಖ ಬೇಳೆಕಾಳುಗಳ ದರದಲ್ಲೂ ಭಾರಿ ಜಿಗಿತ ಕಂಡುಬಂದಿದೆ.

ಆಮದು ವೆಚ್ಚ ಹೆಚ್ಚಿರುವುದರಿಂದ ಪಿಸ್ತಾ, ಕೇಸರಿಯಂತಹ ಡ್ರೈ ಫ್ರೂಟ್ಸ್ ದರಗಳೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. ಒಟ್ಟಾರೆಯಾಗಿ, ಈ ಬಾರಿಯ ಸಾಲು ಸಾಲು ಹಬ್ಬಗಳ ಸಂಭ್ರಮವು ಮಧ್ಯಮ ವರ್ಗ ಹಾಗೂ ಸಾಮಾನ್ಯ ಕುಟುಂಬಗಳ ಜೇಬಿಗೆ ತುಸು ಹೆಚ್ಚೇ ಹೊರೆಯಾಗುವ ಲಕ್ಷಣಗಳು ಸ್ಪಷ್ಟವಾಗಿವೆ.

Leave a Comment

Your email address will not be published. Required fields are marked *