ಸಮಗ್ರ ನ್ಯೂಸ್: ಮಂಗಳೂರು – ಮೈಸೂರು ರಾ.ಹೆದ್ದಾರಿಯ ಮಾಣಿ ಸಮೀಪದ ಹಳೀರ ಬಳಿ ಫ್ಲೈಓವರ್ ಆರಂಭವಾಗುವ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಆಲ್ಟೋ ಕಾರು ಹಾಗೂ ಟೆಂಪೊ ಪಿಕಪ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಮಡಿಕೇರಿ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಿಗ್ಗೆ ಸುಮಾರು 6 ಗಂಟೆಗೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಉಮ್ರಾ ತರಗತಿ ಮುಗಿಸಿಕೊಂಡು ಕುಟುಂಬದ ಸದಸ್ಯರು ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮೃತ ಮಹಿಳೆಯ ಹಾಗೂ ಗಾಯಗೊಂಡವರ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.
ಹಳೀರದ ಸರ್ವಿಸ್ ರಸ್ತೆ ಪುತ್ತೂರು–ಮಡಿಕೇರಿ–ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.









