ಮಂಗಳೂರು: ಬಾಲ್ಕನಿ ಕುಸಿದು ಐವರಿಗೆ ಗಾಯ; ಓರ್ವ ಗಂಭೀರ

ಸಮಗ್ರ ನ್ಯೂಸ್: ಮಂಗಳೂರು ನಗರದ ಎಮ್ಮೆಕೆರೆ ಕ್ರಾಸ್ ಬಳಿ ಇರುವ ರಾಮಲಕ್ಷ್ಮೀ ಹಾಲ್ ಸಭಾಭವನದಲ್ಲಿ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳ ಸಮಾರಂಭ ನಡೆಯುತ್ತಿದ್ದ ವೇಳೆ ಅನಿರೀಕ್ಷಿತ ದುರಂತವೊಂದು ಸಂಭವಿಸಿದೆ. ಅತಿಯಾದ ಜನದಟ್ಟಣೆಯಿಂದಾಗಿ ಕಾರಿಡಾರ್‌ನ ಶಿಥಿಲಗೊಂಡ ತಡೆಗೋಡೆ ಕುಸಿದುಬಿದ್ದ ಪರಿಣಾಮ ವಿದ್ಯಾರ್ಥಿಗಳು ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.

. Ad Widget . Ad Widget . Ad Widget

ಈ ವೇಳೆ ಓರ್ವ ವಿದ್ಯಾರ್ಥಿಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು ಬ್ರೈನ್ ಡೆಡ್ ಸ್ಥಿತಿಯಲ್ಲಿದ್ದಾನೆ. ಉಳಿದ ನಾಲ್ವರು ಗಾಯಗೊಂಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿರುವ ಪ್ರಕಾರ, ಎಮ್ಮೆಕೆರೆ ಕ್ರಾಸ್ ಬಳಿಯ ರಾಮಲಕ್ಷ್ಮೀ ಸಭಾಭವನದಲ್ಲಿ ವಿದ್ಯಾರ್ಥಿಗಳು ತಮ್ಮ ಪದಾಧಿಕಾರಿಗಳ ಸಮಾರಂಭವನ್ನು ಆಚರಿಸಲು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು.

. Ad Widget .

ಈ ವೇಳೆ ಸಭಾಭವನದಲ್ಲಿ ಭಾರಿ ಜನದಟ್ಟಣೆ ಉಂಟಾಗಿತ್ತು. ಕಾರಿಡಾರ್‌ನಲ್ಲಿ ಹೊರಗಡೆ ನಿಂತಿದ್ದ ಕೆಲವು ವಿದ್ಯಾರ್ಥಿಗಳು ಅಲ್ಲಿನ ಆಸರೆ ಗೋಡೆಗೆ ಒರಗಿ ನಿಂತಿದ್ದರು. ಆದರೆ, ಆ ಗೋಡೆ ತೀರಾ ದುರ್ಬಲ ಹಾಗೂ ಶಿಥಿಲಾವಸ್ಥೆಯಲ್ಲಿದ್ದ ಕಾರಣ, ಭಾರ ತಾಳಲಾರದೇ ಏಕಾಏಕಿ ಕುಸಿದುಬಿದ್ದಿದೆ. ಇದರ ಪರಿಣಾಮವಾಗಿ ಗೋಡೆಗೆ ಒರಗಿ ನಿಂತಿದ್ದ ವಿದ್ಯಾರ್ಥಿಗಳು ಆಯತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಒಟ್ಟು 5 ಮಂದಿ ವಿದ್ಯಾರ್ಥಿಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಇದರಲ್ಲಿ ತೀವ್ರವಾಗಿ ಪೆಟ್ಟು ತಿಂದಿರುವ ಓರ್ವ ವಿದ್ಯಾರ್ಥಿ ಪ್ರಸ್ತುತ ಬ್ರೈನ್ ಡೆಡ್ (ಮೆದುಳು ನಿಷ್ಕ್ರಿಯ) ಸ್ಥಿತಿಯಲ್ಲಿದ್ದು, ಆತನ ಸಾವನ್ನು ವೈದ್ಯರು ಅಧಿಕೃತವಾಗಿ ದೃಢಪಡಿಸಿಲ್ಲ. ಆತನಿಗೆ ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ನಿಗಾವಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಉಳಿದ ನಾಲ್ವರು ವಿದ್ಯಾರ್ಥಿಗಳು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಭಾಭವನದ ಸುರಕ್ಷತಾ ಕ್ರಮಗಳು ಹಾಗೂ ಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

Leave a Comment

Your email address will not be published. Required fields are marked *