ಸಮಗ್ರ ನ್ಯೂಸ್: ಸತ್ತಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಮಹಿಳೆ ಜೀವಂತವಾ ಗಿರುವುದು ಗೊತ್ತಾಗಿ ಕುಟುಂಬಸ್ಥರು ಅಚ್ಚರಿಗೊಳಗಾದ ಘಟನೆ ತಾಲೂಕಿನ ಗೊಡಚಿಕೊಂಡ ಗ್ರಾಮದಲ್ಲಿ ನಡೆದಿದೆ.
ವೈದ್ಯರ ಸಮಯಪ್ರಜ್ಞೆಯಿಂದ 63 ವರ್ಷದ ರೇಣುಕಮ್ಮ ಸಂಕೊಳ್ಳಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೇಣುಕಮ್ಮ ಸೋಮವಾರ ರಾತ್ರಿ ತೀವ್ರ ಅಸ್ವಸ್ಥರಾಗಿದ್ದರು. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ತೀವ್ರ ಏರುಪೇರಾಗಿದ್ದರಿಂದ ಪ್ರಜ್ಞಾಹೀನರಾಗಿದ್ದರು. ಕುಟುಂಬಸ್ಥರು ಅವರನ್ನು ಗ್ರಾಮದ ಸ್ಥಳೀಯ ವೈದ್ಯರ ಬಳಿ ಕರೆದೊಯ್ದಿದ್ದರು. ಈ ವೇಳೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಉಸಿರಾಟವೂ ಕ್ಷೀಣಿಸಿತ್ತು ಎನ್ನಲಾಗಿದೆ. ರೇಣುಕಮ್ಮ ಮೃತಪಟ್ಟಿದ್ದಾರೆಂದು ಭಾವಿಸಿದ ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ಆರಂಭಿಸಿದ್ದರು. ಕೆಲ ಸಂಬಂಧಿಕರು ಅಂತಿಮ ದರ್ಶನಕ್ಕಾಗಿ ಹೂವಿನ ಹಾರಗಳೊಂದಿಗೆ ಆಗಮಿಸಿದ್ದರು.
ಈ ವೇಳೆ ರೇಣುಕಮ್ಮ ಅವರ ಎದೆಯ ಭಾಗದಲ್ಲಿ ಉಸಿರಾಟದ ಚಲನೆ ಕಂಡುಬಂದಿದೆ. ಇದರಿಂದ ಕುಟುಂಬಸ್ಥರು ತತ್ ಕ್ಷಣ ಅವರನ್ನು ಹಿರೇಕೆರೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದು, ರೇಣುಕಮ್ಮ ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.










