ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದಾರೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಕಲಬುರಗಿ, ಬೆಂಗಳೂರು ದಕ್ಷಿಣ, ಮಂಡ್ಯ, ಕೊಡಗು, ಧಾರವಾಡ ಹಾಗೂ ಬೀದರ್ ಜಿಲ್ಲೆಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಆರೋಪಿತ ಅಧಿಕಾರಿಗಳು, ಅವರ ಸಂಬಂಧಿಕರು ಹಾಗೂ ಆಪ್ತರಿಗೆ ಸೇರಿದ 33ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸವನಗುಡಿಯ ಜಿಲ್ಲಾ ನೋಂದಣಾಧಿಕಾರಿ ಶ್ರೀದೇವಿ ಅವರ ಬಳಿ ಅತಿ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದೆ. ಅವರ ಬಳಿ ಒಟ್ಟು ₹6.80 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ ₹5.86 ಕೋಟಿ ಮೌಲ್ಯದ ಸ್ಥಿರಾಸ್ತಿಗಳು ಸೇರಿವೆ. ಎರಡು ನಿವೇಶನಗಳು, ಎರಡು ಮನೆಗಳು, ಕೃಷಿ ಭೂಮಿ ಹಾಗೂ ಗಾರ್ಮೆಂಟ್ ಫ್ಯಾಕ್ಟರಿ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ₹30.87 ಲಕ್ಷ ನಗದು, ₹35.58 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, ₹23.15 ಲಕ್ಷ ಮೌಲ್ಯದ ವಾಹನಗಳು ಹಾಗೂ ₹5 ಲಕ್ಷ ಮೌಲ್ಯದ ಇತರ ವಸ್ತುಗಳು ಪತ್ತೆಯಾಗಿವೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಬಿಸಿಎಂ ಇಲಾಖೆ ಹಾಸ್ಟೆಲ್ ಸೂಪರಿಟೆಂಡೆಂಟ್ ಎಂ. ಶಿವರಾಜು ಅವರ ಬಳಿ ₹2.71 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಬೆಂಗಳೂರಿನ ಶಿವಾಜಿನಗರದ ನಿವೃತ್ತ ಜಿಬಿಎ ಸಹಾಯಕ ಎಂಜಿನಿಯರ್ ಎಚ್.ಎಂ. ರಂಗನಾಥ್ ಅವರ ಬಳಿ ₹3.84 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಕಲಬುರಗಿಯ ಜೆಸ್ಕಾಂ ಎಇಇ ರಾಜೇಶ್ವರಿ ಅವರ ಬಳಿ ₹1.91 ಕೋಟಿ, ಕೊಡಗಿನ ಪುರಸಭೆ ಆಯುಕ್ತ ಎಚ್.ಆರ್. ರಮೇಶ್ ಅವರ ಬಳಿ ₹1.78 ಕೋಟಿ ಹಾಗೂ ಧಾರವಾಡದ ಹೆಸ್ಕಾಂ ಎಇಇ ಕಿರಣ್ ಬೈಂದೂರ್ ಅವರ ಬಳಿ ₹1.79 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯ ಎಫ್ಡಿಎ ದರ್ಶನ್ ಗೌಡ ಜಿ. ಅವರ ಬಳಿ ₹1.86 ಕೋಟಿ ಮೌಲ್ಯದ ಆಸ್ತಿ ಹಾಗೂ ಬೀದರ್ನ ನಿವೃತ್ತ ಕೃಷಿ ಅಧಿಕಾರಿ ಮಾಣಿಕ್ ರಾವ್ ಅವರ ಬಳಿ ₹2.51 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ಆಧಾರದ ಮೇಲೆ ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ವೇಳೆ ಪತ್ತೆಯಾದ ಆಸ್ತಿ, ನಗದು, ಚಿನ್ನಾಭರಣ, ದಾಖಲೆಗಳು ಹಾಗೂ ಇತರ ವಸ್ತುಗಳ ಕುರಿತು ಪರಿಶೀಲನೆ ಮುಂದುವರಿದಿದ್ದು, ಪ್ರಕರಣಗಳ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.










