ಸಮಗ್ರ ನ್ಯೂಸ್: ಉಡುಪಿ ಮೂಲದ ವ್ಯಕ್ತಿಯೊಬ್ಬರನ್ನು ಶಾರ್ಜಾದಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿರುವ ಪ್ರಕರಣ ಸುಮಾರು ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಜುಲೈನಲ್ಲಿ ನಡೆದಿರುವುದಾಗಿ ತಿಳಿದುಬಂದಿರುವ ಈ ಪ್ರಕರಣದಲ್ಲಿ ದುಷ್ಕರ್ಮಿಗಳು ಪ್ರಕಾಶ್ ಕುಂದರ್ ಎಂಬುವವರನ್ನು ಕೊಲೆ ಮಾಡಿ ಬಳಿಕ ಮೃತದೇಹವನ್ನು 9 ತುಂಡುಗಳಾಗಿ ಮಾಡಿ ಅವರದ್ದೇ ಕಾರಿನ ಡಿಕ್ಕಿಯಲ್ಲಿ ಇಟ್ಟಿದ್ದರು.
ಪ್ರಕಾಶ್ ಕುಂದರ್ ಶಾರ್ಜಾದಲ್ಲಿ ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರನೊಂದಿಗೆ ವಾಸವಾಗಿದ್ದರು. ಆದರೆ ಕೊಲೆ ಬಳಿಕ ಪತ್ನಿ ಹಾಗೂ ಪುತ್ರ ನಾಪತ್ತೆಯಾಗಿರುವುದು ಪ್ರಕರಣದ ತನಿಖೆಯಲ್ಲಿ ಪ್ರಮುಖ ಅಂಶವಾಗಿದೆ. ಪತ್ನಿಯ ಪಾತ್ರವಿದೆಯೇ ಅಥವಾ ಬೇರೆಯವರ ಸಹಾಯದಿಂದ ಹತ್ಯೆ ನಡೆದಿದೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪತ್ನಿ ಹಾಗೂ ಪುತ್ರ ಭಾರತಕ್ಕೆ ತೆರಳಿರುವ ಸಾಧ್ಯತೆಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಶಾರ್ಜಾ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಹತ್ಯೆಯ ಹಿಂದಿನ ಕಾರಣ ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವವರ ಪತ್ತೆಗೆ ತನಿಖೆ ಮುಂದುವರಿದಿದೆ.
ಜುಲೈ 20ರಂದು ಪ್ರಕಾಶ್ ಅವರ ಸಹೋದರ ಪ್ರಶಾಂತ್ ಕುಂದರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಸಾಮಾನ್ಯವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಪ್ರಕಾಶ್ ಅಂದು ಕೇವಲ ಟೆಕ್ಸ್ಟ್ ಮೆಸೇಜ್ ಮೂಲಕ ಉತ್ತರಿಸಿದ್ದರು. ಬಳಿಕ ಕುಟುಂಬಸ್ಥರು ಕರೆ ಮಾಡುವಂತೆ ಒತ್ತಾಯಿಸಿದ ನಂತರ ಸಂಪರ್ಕ ಕಡಿತಗೊಂಡಿತ್ತು ಎನ್ನಲಾಗಿದೆ.
ಪ್ರಕಾಶ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರು ಕೆಲಸ ಮಾಡುತ್ತಿದ್ದ ಕಂಪನಿಯನ್ನು ಸಂಪರ್ಕಿಸಿದ್ದರು. ಪ್ರಕಾಶ್ ಭಾರತಕ್ಕೆ ತೆರಳಿದ್ದಾರೆ ಎಂದು ಕಂಪನಿ ತಿಳಿಸಿತ್ತು. ಆದರೆ ಅವರು ಭಾರತಕ್ಕೆ ಬಂದಿರಲಿಲ್ಲ ಎಂಬುದು ಗೊತ್ತಾದ ಬಳಿಕ ಶಾರ್ಜಾದಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರು ಹುಡುಕಾಟ ನಡೆಸಿದ ವೇಳೆ ಪ್ರಕಾಶ್ ಅವರ ಕಾರಿನ ಡಿಕ್ಕಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮೃತದೇಹವನ್ನು ಕುಟುಂಬಸ್ಥರು ಪಡೆಯಲು ಕಾಯುತ್ತಿದ್ದಾರೆ.










