ಸಮಗ್ರ ನ್ಯೂಸ್: “ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಯನ್ನು ನೋಡಿ ನಿಮಗೆ ಸಹಿಸಲು ಆಗದಿದ್ದರೆ, ದಯಮಾಡಿ ದೇವರಿಗಾಗಿ ಅದನ್ನು ಸಹಿಸಿಕೊಳ್ಳಿ” ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರೋಧಿಗಳು ಹಾಗೂ ಅಪಪ್ರಚಾರ ಮಾಡುವವರಿಗೆ ಖಾರವಾಗಿ ತಿರುಗೇಟು ನೀಡಿದ್ದಾರೆ.
ದೇವಸ್ಥಾನದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಳಿಬಂದಿರುವ ಆರೋಪಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮುಕ್ತವಾಗಿ ಸ್ಪಷ್ಟನೆ ನೀಡಿದರು.ಕ್ಷೇತ್ರಕ್ಕೆ ವೈಯಕ್ತಿಕವಾಗಿ 1 ಕೋಟಿ ರೂ. ಹಾಗೂ ಚಿನ್ನ ದೇಣಿಗೆ: “ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನನ್ನ ವೈಯಕ್ತಿಕವಾಗಿ 1 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಹೇಳಿದ್ದೆ. ಅದರಂತೆ ಈಗಾಗಲೇ 20 ಲಕ್ಷ ರೂಪಾಯಿ ನಗದನ್ನು ನೀಡಿದ್ದೇನೆ. ಮುಂದಿನ 10 ದಿನಗಳಲ್ಲಿ ಇನ್ನು 25 ಲಕ್ಷ ರೂಪಾಯಿ ತಲುಪಿಸಲಿದ್ದೇನೆ. ಇದರ ಜೊತೆಗೆ 100 ಗ್ರಾಂ ಚಿನ್ನವನ್ನೂ ದೇವಸ್ಥಾನಕ್ಕೆ ಸಮರ್ಪಿಸಿದ್ದೇನೆ” ಎಂದು ಶಾಸಕ ರೈ ತಿಳಿಸಿದರು.
ತಮ್ಮ ಮೇಲಿನ ಅಪವಾದಗಳ ಬಗ್ಗೆ ಮಾತನಾಡಿದ ಅವರು, “ನನ್ನ ಮೇಲೆ ಯಾರಾದರೂ ಅಪವಾದಗಳನ್ನು ಹಾಕುವುದಿದ್ದರೆ ಹಾಕಲಿ, ಬೇಡ ಎನ್ನಲ್ಲ. ಆದರೆ ನಮಗೆ ಮಹಾಲಿಂಗೇಶ್ವರನ ಸೇವೆ ಮಾಡಬೇಕಿದೆಯೇ ಹೊರತು ದೇವಸ್ಥಾನದಿಂದ ಒಂದು ರೂಪಾಯಿಯ ಆಕಾಂಕ್ಷೆಯಾಗಲಿ, ಆಸೆಯಾಗಲಿ ನಮಗಿಲ್ಲ. ಕೈ ಮುಗಿದು ಕೇಳ್ತೀನಿ, ದೇವಸ್ಥಾನ ಮತ್ತು ದೇವರ ಮೇಲೆ ಅಪವಾದ ಮಾಡುವುದನ್ನು ನಿಲ್ಲಿಸಿ” ಎಂದು ಮನವಿ ಮಾಡಿದರು. “ನಾವು ಏನಾದರೂ ತಪ್ಪು ಮಾಡಿದ್ದರೆ ನೇರವಾಗಿ ಬಂದು ಕೇಳಿ.
ಬನ್ನಿ, ನಾವೆಲ್ಲರೂ ಮಹಾಲಿಂಗೇಶ್ವರನ ನಡೆಯಲ್ಲಿ ನಿಂತು ಪ್ರಾರ್ಥನೆ ಮಾಡೋಣ. ಯಾರು ತಪ್ಪು ಮಾಡುತ್ತಾರೋ ಅವರಿಗೆ ಮಹಾಲಿಂಗೇಶ್ವರನೇ ಶಿಕ್ಷೆ ನೀಡಲಿ” ಎಂದು ಶಾಸಕರು ಸವಾಲು ಹಾಕಿದರು.ತಪ್ಪು ಮಾಹಿತಿಗಳಿಗೆ ಕಿವಿ ಕೊಡಬೇಡಿ: ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಾಗಲಿ ಅಥವಾ ತಮ್ಮಲ್ಲಾಗಲಿ ಯಾವುದೇ ಸ್ವಾರ್ಥವಿಲ್ಲ. ಈಶ್ವರ ಭಟ್ಟರು ಸೇರಿದಂತೆ ಇಡೀ ಸಮಿತಿಗೆ ದೇವರ ಸೇವೆ ಮತ್ತು ಕ್ಷೇತ್ರದ ಅಭಿವೃದ್ಧಿ ಒಂದೇ ಮುಖ್ಯ ಗುರಿ. ಆದ್ದರಿಂದ ಭಕ್ತಾದಿಗಳು ಯಾವುದೇ ತಪ್ಪು ಮಾಹಿತಿ ಅಥವಾ ಗೊಂದಲಗಳಿಗೆ ಕಿವಿ ಕೊಡಬಾರದು ಎಂದು ವಿನಂತಿಸಿದ ಅವರು, “ಅಭಿವೃದ್ಧಿ ತಡೆಯಲು ಯತ್ನಿಸುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ” ಎಂದು ಮಾರ್ಮಿಕವಾಗಿ ಹೇಳಿದರು.










