ಸುಬ್ರಹ್ಮಣ್ಯ: ಹೊತ್ತಿ ಉರಿದ‌ KSRTC ಬಸ್| ಚಾಲಕನ ಸಮಯಪ್ರಜ್ಞೆಯಿಂದ 37 ಪ್ರಯಾಣಿಕರು ಪಾರು

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್‌ ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಎರ್ಮಾಯಿಲ್ ಸಮೀಪ ಶನಿವಾರ ರಾತ್ರಿ ಸಂಭವಿಸಿದೆ. ಚಾಲಕನ ತ್ವರಿತ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿದ್ದ 37 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

. Ad Widget . Ad Widget

ಬಿ.ಸಿ‌ ರೋಡ್ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಕುಕ್ಕೆ ಸುಬ್ರಹ್ಮಣ್ಯದಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿತ್ತು. ರಾತ್ರಿ 9:15ರ ವೇಳೆಗೆ ಎರ್ಮಾಯಿಲ್ ತಲುಪುತ್ತಿದ್ದಂತೆ ಬಸ್‌ನ ಇಂಜಿನ್ ಭಾಗದಲ್ಲಿ ಏಕಾಏಕಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದನ್ನು ತಕ್ಷಣವೇ ಗಮನಿಸಿದ ಚಾಲಕ, ವಾಹನವನ್ನು ರಸ್ತೆಬದಿಗೆ ನಿಲ್ಲಿಸಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಆತಂಕಕ್ಕೆ ಅವಕಾಶ ನೀಡದೆ, ಎಲ್ಲ ಪ್ರಯಾಣಿಕರನ್ನು ತಕ್ಷಣವೇ ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಚಾಲಕ ಯಶಸ್ವಿಯಾಗಿದ್ದಾರೆ.

. Ad Widget . . Ad Widget . Ad Widget

ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಬಸ್‌ಗೆ ಆವರಿಸಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಶಾರ್ಟ್ ಸರ್ಕ್ಯೂಟ್ ಅಥವಾ ಇಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷವೇ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ನಿಖರ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ. ಚಾಲಕ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಂಡಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

Leave a Comment

Your email address will not be published. Required fields are marked *