ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲ್ಪಡುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ಮರಿಯಮ್ಮ ಜಯಂತಿ/ತೆನೆ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸುವಂತೆ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನಾಡಿನೆಲ್ಲೆಡೆ ಸಾಲು ಸಾಲು ಹಬ್ಬಗಳ ಸಂಭ್ರಮ ಮನೆಮಾಡಿದ್ದು, ಸೆಪ್ಟೆಂಬರ್ 4 ರಂದು ಕರಾವಳಿಯಾದ್ಯಂತ ಅತ್ಯಂತ ವಿಜೃಂಭಣೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ಧಾರ್ಮಿಕ ಆಚರಣೆಯಾಗಿರದೆ, ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯಗಳು ಹಾಗೂ ನೈತಿಕ ಶಿಕ್ಷಣವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಪರಂಪರೆಯಾಗಿದೆ ಎಂದು ಶಾಸಕರು ಉಲ್ಲೇಖಿಸಿದ್ದಾರೆ.
ಅದೇ ರೀತಿ, ಸೆಪ್ಟೆಂಬರ್ 8 ರಂದು ಕರಾವಳಿಯ ಕ್ರೈಸ್ತ ಸಮುದಾಯದವರು ಅತ್ಯಂತ ವಿಶೇಷವಾಗಿ ಮರಿಯ ಜಯಂತಿ ಹಾಗೂ ತೆನೆ ಹಬ್ಬವನ್ನು (ಮೋಂತಿ ಫೆಸ್ಟ್) ಆಚರಿಸಲಿದ್ದಾರೆ. ಈ ಹಬ್ಬದ ಆಚರಣೆಗೆ ಅನುಕೂಲವಾಗುವಂತೆ ರಜೆ ಘೋಷಣೆ ಮಾಡಬೇಕೆಂದು ಕ್ರೈಸ್ತ ಸಮುದಾಯದ ಹಲವು ಮುಖಂಡರು ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಮುಖರು ತಮ್ಮ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಮ್ಮ ವಿವೇಚನಾ ಅಧಿಕಾರವನ್ನು ಬಳಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 4 ರಂದು ‘ಶ್ರೀ ಕೃಷ್ಣ ಜನ್ಮಾಷ್ಟಮಿ’ ಹಾಗೂ ಸೆಪ್ಟೆಂಬರ್ 8 ರಂದು ‘ಮರಿಯ ಜಯಂತಿ/ತೆನೆ ಹಬ್ಬಕ್ಕೆ’ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅವರು ಪತ್ರದ ಮೂಲಕ ಕೋರಿದ್ದಾರೆ.

















