ಸಮಗ್ರ ನ್ಯೂಸ್: ಹಿಮ ಪರ್ವತಗಳ ಸುಂದರ ದೇಶ ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಸರಣಿ ಭೂಕುಸಿತದಿಂದಾಗಿ ಭೀಕರ ಜಲಪ್ರಳಯ ಸಂಭವಿಸಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಈಗಾಗಲೇ 903ಕ್ಕೆ ಏರಿಕೆಯಾಗಿದ್ದು, ಸುಮಾರು 4,000 ಜನರು ನಾಪತ್ತೆಯಾಗಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾಲಿಟ್ಟಲ್ಲೆಲ್ಲ ಶವಗಳ ರಾಶಿ ಕಂಡುಬರುತ್ತಿದ್ದು, ಶವಗಳ ದುರ್ನಾತದಿಂದ ಇಡೀ ಪ್ರದೇಶವೇ ನರಕಸಾದೃಶ್ಯವಾಗಿ ಬದಲಾಗಿದೆ. ಅನೇಕ ಶವಗಳು ಸಂಪೂರ್ಣವಾಗಿ ಸಿಥಿಲಗೊಂಡಿರುವುದರಿಂದ ಅವುಗಳ ಗುರುತು ಪತ್ತೆ ಮಾಡುವುದು ರಕ್ಷಣಾ ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸ್ಥಳೀಯ ಆಡಳಿತ ಮತ್ತು ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ 10,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರಕ್ಷಿಸಿ ಸ್ಥಳಾಂತರಿಸಲಾಗಿದೆ. ಆದಾಗ್ಯೂ, ಸಂಪರ್ಕ ಕಡಿತಗೊಂಡಿರುವ ದುರ್ಗಮ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವುದು ಅತ್ಯಂತ ಕಷ್ಟಕರವಾಗಿದ್ದು, ರಕ್ಷಣಾ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ನಾಪತ್ತೆಯಾದವರ ಹುಡುಕಾಟ ತೀವ್ರವಾಗಿ ನಡೆಯುತ್ತಿದ್ದು, ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.


















