ಸಮಗ್ರ ನ್ಯೂಸ್: ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದರೂ, ದೇಶದ ಮೇಲಿನ ಸಾಲದ ಹೊರೆಯೂ ಹೆಚ್ಚಾಗುತ್ತಿದೆ. ಮಾರ್ಚ್ 2026ರ ವೇಳೆಗೆ ಕೇಂದ್ರ ಸರ್ಕಾರದ ಒಟ್ಟು ಸಾಲ ಬರೋಬ್ಬರಿ ₹200.53 ಲಕ್ಷ ಕೋಟಿಗೆ ತಲುಪಿದೆ. ಈ ಪೈಕಿ ₹191.46 ಲಕ್ಷ ಕೋಟಿ ದೇಶೀಯ ಸಾಲವಾಗಿದ್ದರೆ, ₹9.07 ಲಕ್ಷ ಕೋಟಿ ವಿದೇಶಿ ಸಾಲವಾಗಿದೆ. ಇನ್ನು ಸಾಲದ ಮೇಲಿನ ಬಡ್ಡಿ ಪಾವತಿಗೂ ಸರ್ಕಾರ ₹12.74 ಲಕ್ಷ ಕೋಟಿ ಖರ್ಚು ಮಾಡುತ್ತಿದೆ.
ವಿಶ್ವಬ್ಯಾಂಕ್ನ 2025ರ ಅಂಕಿಅಂಶಗಳ ಪ್ರಕಾರ ಭಾರತದ ಜಿಡಿಪಿ (GDP) ಸುಮಾರು 3.96 ಟ್ರಿಲಿಯನ್ ಡಾಲರ್ನಷ್ಟಿದೆ. ನಮ್ಮ ನೆರೆಯ ದೇಶ ಪಾಕಿಸ್ತಾನದ ಜಿಡಿಪಿ ಕೇವಲ 407.3 ಬಿಲಿಯನ್ ಡಾಲರ್ಗಳಷ್ಟಿದೆ. ಅಂದರೆ ಭಾರತದ ಆರ್ಥಿಕ ವ್ಯವಸ್ಥೆ ಪಾಕಿಸ್ತಾನಕ್ಕಿಂತ ಸುಮಾರು 9.7 ಪಟ್ಟು ದೊಡ್ಡದಾಗಿದೆ. ಆದರೆ, ಈ ಭರ್ಜರಿ ಬೆಳವಣಿಗೆಯ ಹಿಂದೆ ದೇಶದ ಮೇಲೆ ಹೆಚ್ಚುತ್ತಿರುವ ಸಾಲದ ಹೊರೆಯೂ ಇದೆ.
ಮಾರ್ಚ್ 2026ರ ವೇಳೆಗೆ ಕೇಂದ್ರ ಸರ್ಕಾರದ ಒಟ್ಟು ಸಾಲ ಸುಮಾರು ₹200.53 ಲಕ್ಷ ಕೋಟಿಗೆ ತಲುಪಿದೆ. ಮಾರ್ಚ್ 2026ರಲ್ಲಿ ಸಂಸತ್ತಿನಲ್ಲಿ ಹಣಕಾಸು ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಮಾರ್ಚ್ 31, 2026ರ ವೇಳೆಗೆ ಇದ್ದ ಈ ₹200.53 ಲಕ್ಷ ಕೋಟಿ ಸಾಲದಲ್ಲಿ ದೇಶೀಯ ಸಾಲ ₹191.46 ಲಕ್ಷ ಕೋಟಿಯಾಗಿದ್ದರೆ, ವಿದೇಶಿ ಸಾಲ ₹9.07 ಲಕ್ಷ ಕೋಟಿಯಾಗಿದೆ. ಕೇಂದ್ರ ಸರ್ಕಾರದ ಒಟ್ಟು ಸಾಲವು ಜಿಡಿಪಿಯ ಶೇ.56.1ರಷ್ಟಿದೆ. ಕೇಂದ್ರ ಸರ್ಕಾರದ ಬಜೆಟ್ ದಾಖಲೆಗಳ ಪ್ರಕಾರ, 2026-27ರ ಆರ್ಥಿಕ ವರ್ಷ ಅಂತ್ಯದ ವೇಳೆಗೆ ಈ ಸಾಲದ ಮೊತ್ತ ಸುಮಾರು ₹218.63 ಲಕ್ಷ ಕೋಟಿಗೆ ಏರಿಕೆಯಾಗುವ ಸಾಧ್ಯತೆಯಿದೆ.
ಸರ್ಕಾರ ಬಿಡುಗಡೆ ಮಾಡಿರುವ 2026-27ರ ಬಜೆಟ್ ದಾಖಲೆ ಮತ್ತೊಂದು ವ್ಯಾಪಕ ಲೆಕ್ಕವನ್ನು ನೀಡಿದೆ. ಈ ವರ್ಷದ ಮಾರ್ಚ್ 31ರ ವೇಳೆಗೆ ಒಟ್ಟು ಸರ್ಕಾರಿ ಸಾಲ ₹197.18 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ. ಇದರಲ್ಲಿ ಆಂತರಿಕ ಸಾಲ ₹190.44 ಲಕ್ಷ ಕೋಟಿಯಾಗಿದ್ದು, ವಿದೇಶಿ ಸಾಲ ₹6.74 ಲಕ್ಷ ಕೋಟಿಯಾಗಿದೆ. ಆದರೆ ವಿವಿಧ ಲೆಕ್ಕಾಚಾರ ಪದ್ಧತಿಗಳು, ಪ್ರಸ್ತುತ ವಿನಿಮಯ ದರಗಳು, EBR ಮತ್ತು ನಗದು ಶಿಲ್ಕಿನ ಹೊಂದಾಣಿಕೆಗಳನ್ನು ಮಾಡಿದ ಬಳಿಕ ಈ ಒಟ್ಟು ಸಾಲದ ಮೊತ್ತ ₹200.53 ಲಕ್ಷ ಕೋಟಿಗೆ ಸಮನಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಸರ್ಕಾರದ ಸಾಲ ಎಂದಾಕ್ಷಣ ಯಾವುದೋ ಒಂದು ವಿದೇಶಿ ಬ್ಯಾಂಕ್ ಅಥವಾ ಒಂದು ದೇಶ ಹಣ ನೀಡುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಅದು ತಪ್ಪು. ಕೇಂದ್ರ ಸರ್ಕಾರ ವಿವಿಧ ಮಾರ್ಗಗಳ ಮೂಲಕ ಹಣವನ್ನು ಸಂಗ್ರಹಿಸುತ್ತದೆ. ಸರ್ಕಾರ ಪಡೆಯುವ ಸಾಲದಲ್ಲಿ ಅತಿ ದೊಡ್ಡ ಭಾಗ ದೇಶೀಯ ಮಾರುಕಟ್ಟೆಯಿಂದಲೇ ಬರುತ್ತದೆ. ಸರ್ಕಾರ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಬಾಂಡ್ಗಳು, ಡಿಬೆಂಚರ್ಗಳು ಮತ್ತು ಟ್ರೆಜರಿ ಬಿಲ್ಗಳ ಮೂಲಕ ಈ ಹಣ ಸಂಗ್ರಹವಾಗುತ್ತದೆ. ಅಂದರೆ ದೇಶದ ಬ್ಯಾಂಕ್ಗಳು, ವಿಮಾ ಕಂಪನಿಗಳು, ಪಿಂಚಣಿ ನಿಧಿಗಳು, ಮ್ಯೂಚುವಲ್ ಫಂಡ್ಗಳಂತಹ ಸಾಂಸ್ಥಿಕ ಹೂಡಿಕೆದಾರರು ಈ ಸರ್ಕಾರಿ ಬಾಂಡ್ಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ.
ಒಟ್ಟು ₹200.53 ಲಕ್ಷ ಕೋಟಿ ಸಾಲದಲ್ಲಿ ವಿದೇಶಿ ಸಾಲ ಕೇವಲ ₹9.07 ಲಕ್ಷ ಕೋಟಿಯಷ್ಟಿದೆ. ಆಂತರಿಕ ಸಾಲ ₹191.46 ಲಕ್ಷ ಕೋಟಿಯಾಗಿದೆ. ಇದರಿಂದ ಸರ್ಕಾರದ ಒಟ್ಟು ಸಾಲದಲ್ಲಿ ವಿದೇಶಿ ಸಾಲದ ಪಾಲು ಬಹಳ ಕಡಿಮೆ ಎಂಬುದು ಅರ್ಥವಾಗುತ್ತದೆ. 2026-27ರ ಬಜೆಟ್ ಲೆಕ್ಕಗಳ ಪ್ರಕಾರವೂ ದೇಶೀಯ ಸಾಲಗಳಿಗೆ ಹೋಲಿಸಿದರೆ ವಿದೇಶಿ ಸಾಲದ ಪ್ರಮಾಣ ತುಂಬಾ ಕಡಿಮೆಯಾಗಿದೆ. ಭಾರತವು ವಿದೇಶಿ ಸಾಲದ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಹಣಕಾಸು ಸಚಿವಾಲಯವು ಸಂಸತ್ತಿನಲ್ಲಿ ನೀಡಿದ ಮಾಹಿತಿಯ ಪ್ರಕಾರ, 2025-26ರ ಪರಿಷ್ಕೃತ ಅಂದಾಜಿನಲ್ಲಿ ಕೇಂದ್ರ ಸರ್ಕಾರ ಪಾವತಿಸಿದ ಒಟ್ಟು ಬಡ್ಡಿ ₹12.74 ಲಕ್ಷ ಕೋಟಿಯಾಗಿದೆ. ಇದರಲ್ಲಿ ದೇಶೀಯ ಸಾಲದ ಬಡ್ಡಿ ₹12.42 ಲಕ್ಷ ಕೋಟಿಯಾಗಿದ್ದು, ವಿದೇಶಿ ಸಾಲದ ಬಡ್ಡಿ ₹0.33 ಲಕ್ಷ ಕೋಟಿಯಾಗಿದೆ. ಸರ್ಕಾರ ಗಳಿಸುವ ಒಟ್ಟು ಆದಾಯದಲ್ಲಿ ಸುಮಾರು ಶೇ.38.1ರಷ್ಟು ಹಣ ಕೇವಲ ಹಳೆಯ ಸಾಲಗಳ ಬಡ್ಡಿ ಪಾವತಿಗೇ ಹೋಗುತ್ತಿದೆ.
ಆದರೆ ಈ ಸಾಲದ ಅಂಕಿಅಂಶಗಳನ್ನು ನೋಡಿದ ತಕ್ಷಣ ಭಾರತ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ಹೇಳಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಫಿಚ್ ಈ ವರ್ಷದ ಆಗಸ್ಟ್ 11ರಂದು ಭಾರತದ ರೇಟಿಂಗ್ ಸ್ಥಿರವಾಗಿದೆ ಎಂದು ತಿಳಿಸಿದೆ. ಆದರೆ FY2026ರಲ್ಲಿ ದೇಶದ ಒಟ್ಟು ಸರ್ಕಾರಿ ಸಾಲ ಜಿಡಿಪಿಯ ಶೇ.84.4ರಷ್ಟಿರಲಿದೆ ಎಂದು ಅಂದಾಜಿಸಿರುವ ಫಿಚ್, ಈ ಭಾರೀ ಸಾಲದ ಹೊರೆ ಭಾರತದ ಆರ್ಥಿಕ ವ್ಯವಸ್ಥೆಗೆ ಒಂದು ಸವಾಲಾಗಿದೆ ಎಂದು ಹೇಳಿದೆ.


















