ಸಮಗ್ರ ನ್ಯೂಸ್: ಭಾರತ ನಿಧಾನವಾಗಿ ಅಭಿವೃದ್ಧಿಯತ್ತ ಹೊರಳುತ್ತಿದೆ. ಇದಕ್ಕೆ ಈ ಪೌರಕಾರ್ಮಿಕರೇ ಸಾಕ್ಷಿ. ಇವರು ಬಂಟ್ವಾಳದ ಸೇಸಪ್ಪ. ಅವರು ಇಲ್ಲಿನ ಪುರಸಭೆಯ ಪೌರ ಕಾರ್ಮಿಕ. ಬೀದಿ ಬದಿಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಅವರು ಬರುವುದು ಟೊಯೊಟ ಫಾರ್ಚೂನರ್ ಕಾರಿನಲ್ಲಿ.
ಕಸ ಗುಡಿಸುವ ಅವರ ಕೆಲಸ ನಿತ್ಯ ಬೆಳಿಗ್ಗೆ 5ಕ್ಕೆ ಶುರುವಾಗುತ್ತದೆ. ಕೆಲಸದ ಸ್ಥಳಕ್ಕೆ ಫಾರ್ಚೂನರ್ ಕಾರನ್ನು ಸ್ವತಃ ಚಲಾಯಿಸಿಕೊಂಡು ಬರುವ ಅವರು, ಮಧ್ಯಾಹ್ನ 12ರ ವರೆಗೆ ಕಸ ಗುಡಿಸುತ್ತಾರೆ. ಬಳಿಕ ಅದೇ ಕಾರಿನಲ್ಲಿ ನಿರ್ಗಮಿಸುತ್ತಾರೆ. ಪುರಸಭೆಯವರು ತಮಗೆ ವಹಿಸುವ ಇತರ ಕೆಲಸಗಳನ್ನು ಚಾಚೂ ತಪ್ಪದೇ ನಿರ್ವಹಿಸುತ್ತಾರೆ. ಅಗತ್ಯ ಬಿದ್ದಾಗ ಕಸ ವಿಲೇವಾರಿ ವಾಹನದ ಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಾರೆ.
ಬಾಲ್ಯದಲ್ಲೇ ತಂದೆ – ತಾಯಿಯನ್ನು ಕಳೆದುಕೊಂಡಿದ್ದ ಸೇಸಪ್ಪ 1996ರಲ್ಲಿ ಗುತ್ತಿಗೆ ಆಧರಿತ ಪೌರ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದರು. 2023ರಲ್ಲಿ ಅವರ ನೌಕರಿ ಕಾಯಂ ಆಗಿದೆ. ಅವರು ಕಲಿತದ್ದು 3ನೇ ತರಗತಿವರೆಗೆ. ಆದರೆ, ಬದುಕಿನ ಅನುಭವದಿಂದ ಕಲಿತ ಪಾಠ ಅವರನ್ನು ಈ ಹಂತಕ್ಕೆ ಬೆಳೆಸಿದೆ.
ಒಂದು ಕಾಲದಲ್ಲಿ ಇವರು ಮದ್ಯವ್ಯಸನಿಯಾಗಿ ಕಷ್ಟದಲ್ಲಿದ್ದರು. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಬೆಳ್ಳಿಯಪ್ಪ ಅವರ ಮಾತಿನಿಂದ ಪ್ರೇರಣೆ ಪಡೆದು ಮದ್ಯ ವ್ಯಸನ ತ್ಯಜಿಸುವ ದೃಢ ನಿರ್ಧಾರವನ್ನು 2005ರಲ್ಲಿ ಕೈಗೊಂಡರು. ಮಧ್ಯಾಹ್ನದ ಬಳಿಕ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಬಿಡುವಿನ ಅವಧಿಯನ್ನು ಹೈನುಗಾರಿಕೆಗೂ ವಿನಿಯೋಗಿಸುತ್ತಾರೆ. ಅವರ ಮನೆಯಲ್ಲಿ ಎರಡು ಹಸು, ಒಂದು ಕರು ಇದೆ.
‘ತಿಂಗಳ ಸಂಬಳ ₹47ಸಾವಿರ ಇದೆ. ಜೊತೆಗೆ ಹೈನುಗಾರಿಕೆಯಿಂದಲೂ ಹೆಚ್ಚುವರಿ ಆದಾಯ ಬರುತ್ತದೆ’ ಎನ್ನುತ್ತಾರೆ ಸೇಸಪ್ಪ. ಪರಿಶಿಷ್ಟ ಸಮುದಾಯದ ಪರವ ಜಾತಿಯವರಾದ ಅವರು ದೈವ ನರ್ತಕರಾಗಿಯೂ ಸೇವೆ ಸಲ್ಲಿಸುತ್ತಿದ್ದು, ಅದರಿಂದಲೂ ವರಮಾನ ಬರುತ್ತಿದೆ. ಅವರ ಮಗ ಜಯರಾಮ ಕೂಡ ದೈವ ನರ್ತಕ. ಸೇಸಪ್ಪ ಅವರ ಪತ್ನಿ ಕುಸುಮಾ ಪೌರಕಾರ್ಮಿಕರಾಗಿದ್ದಾರೆ.
ಸೇಸಪ್ಪ ಅವರಿಗೆ ಮೊದಲಿನಿಂದಲೂ ಕಾರುಗಳ ವ್ಯಾಮೋಹ. ಮದ್ಯವ್ಯಸನ ತೊರೆದ ಬಳಿಕ, ಕಾರು ಖರೀದಿಯ ಕನಸು ಮತ್ತೆ ಗರಿಗೆದರಿತ್ತು. ಆರಂಭದಲ್ಲಿ ಮಾರುತಿ 800, ಬಳಿಕ ಆಲ್ಟೊ, ಆಮ್ನಿ, ಸ್ವಿಫ್ಟ್, ಸ್ಕಾರ್ಪಿಯೊ.. ಹೀಗೆ ಹಳೆ ಕಾರುಗಳನ್ನು ಖರೀದಿಸಿದ್ದರು. ಸ್ವಿಫ್ಟ್ ಮತ್ತು ಸ್ಕಾರ್ಪಿಯೊ ಕಾರುಗಳನ್ನು ಮಾರಾಟ ಮಾಡಿ 10 ದಿನಗಳ ಹಿಂದಷ್ಟೇ ಸುಮಾರು ₹12 ಲಕ್ಷ ಮೌಲ್ಯದ ಫಾರ್ಚೂನರ್ (2013ರ ನೋಂದಣಿ) ಕಾರನ್ನು ಖರೀದಿಸಿದ್ದಾರೆ. ಇದಕ್ಕಾಗಿ ₹9 ಲಕ್ಷ ಸಾಲ ಮಾಡಿದ್ದಾರೆ. ಕಾರು ಮಗನ ಹೆಸರಿನಲ್ಲಿ ನೋಂದಣಿಯಾಗಿದೆ. ನಾವೂರಿನಲ್ಲಿರುವ 15 ಸೆಂಟ್ಸ್ ಜಮೀನಿನಲ್ಲಿ ಸ್ವಂತ ಮನೆಯನ್ನೂ ಕಟ್ಟಿಸಿದ್ದಾರೆ.
‘ಒಂದು ಕಾಲದಲ್ಲಿ ತಂದೆಯ ಅಂತ್ಯಕ್ರಿಯೆಗೂ ಹಣವಿಲ್ಲದೆ ಪರದಾಡಿದ್ದೆ. ಬದುಕಿನಲ್ಲಿ ಅನೇಕ ಕಷ್ಟ ಎದುರಿಸಿದ್ದೇನೆ. ದೈವದ ಚಾಕರಿ ಹಾಗೂ ಪೌರ ಕಾರ್ಮಿಕ ವೃತ್ತಿಯನ್ನು ಶ್ರದ್ಧೆಯಿಂದ ನಿರ್ವಹಿಸಿದ್ದ ರಿಂದ ಎಲ್ಲರಂತೆ ಗೌರವಯುತವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ’ ಎಂದು ಸೇಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.


















