ಸಮಗ್ರ ನ್ಯೂಸ್: ಕೇವಲ ಐಷಾರಾಮಿ ಜೀವನದ ಹಪಾಹಪಿಗೆ ಬಿದ್ದ ಇಬ್ಬರು 10ನೇ ತರಗತಿಯ ವಿದ್ಯಾರ್ಥಿಗಳು, ತಮ್ಮದೇ ಶಾಲೆಯ ಪ್ರಾಂಶುಪಾಲರನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯ ಶಾಲೆಯೊಂದರ ಪ್ರಾಂಶುಪಾಲರಾದ ಕಲ್ಲು ರೂಪಾ ರೆಡ್ಡಿ ಎಂಬುವವರು ಆಗಸ್ಟ್ 11ರಂದು ತಮ್ಮ ಮನೆಯಲ್ಲಿಯೇ ಭೀಕರವಾಗಿ ಕೊಲೆಯಾಗಿದ್ದರು. ಈ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ದಿಗಿಲು ಹುಟ್ಟಿಸುವ ಸತ್ಯಾಂಶಗಳು ಲಭ್ಯವಾಗಿವೆ. ಈ ಕೊಲೆ ಮಾಡಿದ್ದು ಬೇರಾರೂ ಅಲ್ಲ, ಅದೇ ಶಾಲೆಯ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು!
ಈ ಇಬ್ಬರು ವಿದ್ಯಾರ್ಥಿಗಳು ಹಾಸ್ಟೆಲ್ನ ಒಂದೇ ರೂಮಿನಲ್ಲಿದ್ದರು. ಇವರಿಗೆ ದುಬಾರಿ ಐಫೋನ್, ಬೈಕ್ ಮತ್ತು ಐಷಾರಾಮಿ ಜೀವನ ನಡೆಸುವ ಹುಚ್ಚು ಇತ್ತು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೇಗ ಹಣ ಮಾಡುವುದು ಹೇಗೆ? ಎಂದು ಸರ್ಚ್ ಮಾಡುತ್ತಿದ್ದರು. ಇವರ ಈ ದುಂದುವೆಚ್ಚದ ಬಗ್ಗೆ ತಿಳಿದ ಪ್ರಾಂಶುಪಾಲ ರೂಪಾ ರೆಡ್ಡಿ ಅವರು, ವಿದ್ಯಾರ್ಥಿಗಳನ್ನು ತಿದ್ದಲು ಪ್ರಯತ್ನಿಸಿದ್ದರು. ನಿಮ್ಮ ನಡವಳಿಕೆ ಬಗ್ಗೆ ಪೋಷಕರಿಗೆ ದೂರು ನೀಡುತ್ತೇನೆ ಎಂದು ಎಚ್ಚರಿಸಿದ್ದರು. ಇದೇ ಈ ವಿದ್ಯಾರ್ಥಿಗಳ ಕೆಂಗಣ್ಣಿಗೆ ಕಾರಣವಾಯಿತು.
ತಮ್ಮ ಹಾದಿಗೆ ಅಡ್ಡ ಬಂದ ಪ್ರಾಂಶುಪಾಲರನ್ನು ಮುಗಿಸಲು ಸ್ಕೆಚ್ ಹಾಕಿದ ವಿದ್ಯಾರ್ಥಿಗಳು, ಸುಮಾರು ಒಂದು ವಾರ ಅವರ ಮನೆಯ ರೆಕ್ಕಿ (Reece) ನಡೆಸಿದ್ದರು. ಸಿಸಿಟಿವಿ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಮುಖವಾಡ ಗ್ಲೌಸ್ ಧರಿಸಿ ಮನೆಯ ಹಿಂಬಾಗಿಲಿನಿಂದ ನುಗ್ಗಿದ್ದರು. ಪ್ರಾಂಶುಪಾಲರು ಇವರನ್ನು ಗುರುತಿಸಿದ ತಕ್ಷಣ ಬರೋಬ್ಬರಿ 27 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಂತರ ಮನೆಯಲ್ಲಿದ್ದ ನಗದು ಮತ್ತು ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದರು.
ಈ ನಿಗೂಢ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಿಕ್ಕಿದ್ದು ಒಂದೇ ಒಂದು ಸುಳಿವು. ಸಾಯುವ ಕೆಲವೇ ಕ್ಷಣಗಳ ಮೊದಲು ರೂಪಾ ರೆಡ್ಡಿ ಅವರು ತಮ್ಮ ಅತ್ತೆಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಆಗ ಅವರು ಹೇಳಿದ ಕೊನೆಯ ಮಾತು ಬಾಬು. ಆ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಬಾಬು ಎಂದು ಕರೆಯುವ ರೂಢಿಯಿತ್ತು. ಇದನ್ನೇ ಬೆನ್ನತ್ತಿದ ಪೊಲೀಸರು ಸುಮಾರು 80 ಜನರನ್ನು ವಿಚಾರಣೆ ನಡೆಸಿ ಅಂತಿಮವಾಗಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಪೊಲೀಸರು ಈ ವಿದ್ಯಾರ್ಥಿಗಳನ್ನು ತಡೆದು ತಪಾಸಣೆ ನಡೆಸಿದಾಗ ಅವರ ಬಳಿ 1.54 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ವಿಶೇಷವೆಂದರೆ ಆ ಹಣದಲ್ಲಿದ್ದ ಮೂರು 500 ರೂಪಾಯಿ ನೋಟುಗಳ ಮೇಲೆ ರಕ್ತದ ಕಲೆಗಳಿದ್ದವು! ಅಲ್ಲದೆ ಕದ್ದ ಹಣದಲ್ಲಿ ಇವರು ಈಗಾಗಲೇ 60 ಸಾವಿರ ರೂಪಾಯಿ ನೀಡಿ ಹೊಸ ಐಫೋನ್ ಖರೀದಿಸಿದ್ದರು. ಪ್ರಾಂಶುಪಾಲರ ಹತ್ಯೆಯ ಈ ಘಟನೆ ಕೇವಲ ಒಂದು ಕ್ರಿಮಿನಲ್ ಪ್ರಕರಣವಲ್ಲ. ಇದು ಇಂದಿನ ಮಕ್ಕಳಲ್ಲಿ ಬೆಳೆಯುತ್ತಿರುವ ಅತಿಯಾದ ಆಸೆ ಸಾಮಾಜಿಕ ಜಾಲತಾಣಗಳ ನಕಾರಾತ್ಮಕ ಪ್ರಭಾವ ಮತ್ತು ನೈತಿಕ ಮೌಲ್ಯಗಳ ಕುಸಿತಕ್ಕೆ ಕನ್ನಡಿ ಹಿಡಿದಿದೆ. ಮಕ್ಕಳ ಕೈಗೆ ಮೊಬೈಲ್ ನೀಡುವ ಮುನ್ನ ಅವರು ಏನು ಮಾಡುತ್ತಿದ್ದಾರೆ ಎಂಬ ನಿಗಾ ವಹಿಸುವುದು ಪೋಷಕರಿಗೆ ಈಗ ಅನಿವಾರ್ಯವಾಗಿದೆ.




























