ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಮಡಿಕೇರಿ ನಗರದ ಸ್ಟೋನ್ ಹಿಲ್ ಬೆಟ್ಟದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಬೆಟ್ಟದ ಮೇಲಿದ್ದ ನೂರಾರು ಟನ್ ಕಸದ ರಾಶಿ ಕೆಳಭಾಗಕ್ಕೆ ಧಾವಿಸಿಬಂದಿದೆ. ಬೆಟ್ಟದ ತುದಿಯಲ್ಲಿ ವರ್ಷಗಳಿಂದ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿದ್ದುದೇ ಈ ದುರಂತಕ್ಕೆ ಮುಖ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಪೋಲಿಸ್ ವಸತಿ ಸಮುಚ್ಚಯಕ್ಕೆ ಕಸದ ರಾಶಿ ಭೀತಿ
ಬೆಟ್ಟದ ಕೆಳಭಾಗದಲ್ಲೇ ಪೊಲೀಸ್ ವಸತಿ ಗೃಹಗಳಿದ್ದು, ಕುಸಿತದಿಂದಾಗಿ ದೊಡ್ಡ ಪ್ರಮಾಣದ ಕಸ ಮತ್ತು ಮಣ್ಣಿನ ಮಿಶ್ರಣ ವಸತಿ ಸಮುಚ್ಚಯದತ್ತ ಕೊಚ್ಚಿಬರುತ್ತಿದೆ. ಇದರಿಂದಾಗಿ ಅಲ್ಲಿ ವಾಸಿಸುತ್ತಿರುವ ಕುಟುಂಬಗಳಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ.
ಸ್ಥಳೀಯ ನಗರಸಭೆ ಸದಸ್ಯ ಅಪ್ಪಣ್ಣ ಈ ಬಗ್ಗೆ ಮಾತನಾಡಿ, “ಸ್ಥಳದಲ್ಲಿ ಸಂಗ್ರಹವಾಗಿರುವ ಕಸವನ್ನು ತಕ್ಷಣವೇ ತೆರವುಗೊಳಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅನಾಹುತ ಸಂಭವಿಸಲಿದೆ” ಎಂದು ಎಚ್ಚರಿಸಿದ್ದಾರೆ.
ಇನ್ನು ಭಾರಿ ಮಳೆಯಿಂದಾಗಿ ಮಡಿಕೇರಿಯ ಆಕಾಶವಾಣಿ ಟವರ್ ಬಳಿ ನಿರ್ಮಾಣ ಹಂತದಲ್ಲಿದ್ದ ತಡೆ ಗೋಡೆ ಕುಸಿತವಾಗಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 2018ರ ಮಳೆಗಾಲದಲ್ಲೇ ಆಕಾಶವಾಣಿ ಟವರ್ ಬಳಿ ಬರೆ ಕುಸಿತವಾಗಿತ್ತು. ಈ ಬಾರಿಯ ಮಳೆಗೆ ಬರೆ ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಆದರೆ ಮಂಗಳವಾರ ಸುರಿದ ಮಳೆಯಿಂದಾಗಿ ಮಣ್ಣಿನ ತೇವ ಹೆಚ್ಚಾದ ಪರಿಣಾಮ ಮೆಲ್ಭಾಗದ ಮಣ್ಣು ಸಣ್ಣ ಪ್ರಮಾಣದಲ್ಲಿ ಕುಸಿತವಾಗಿದೆ.








