ಸಮಗ್ರ ನ್ಯೂಸ್: ಲೋಕಸಭೆಯಲ್ಲಿ ಬುಧವಾರ ತೀವ್ರ ಗದ್ದಲ ಮತ್ತು ವಾಕ್ಸಮರದ ನಡುವೆಯೇ ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ-2026 ಧ್ವನಿಮತದ ಮೂಲಕ ಅಂಗೀಕಾರವಾಯಿತು.
ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ದೇಶಾದ್ಯಂತ ಉಂಟಾದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು.ಇದೇ ವೇಳೆ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಮಾಡಿದ ಹೇಳಿಕೆಯನ್ನು ವಿರೋಧಿಸಿ ಭಾರೀ ಗದ್ದಲ ಉಂಟಾಯಿತು. ಈ ಬೆಳವಣಿಗೆಯ ನಡುವೆಯೇ ಪ್ರತಿಪಕ್ಷ ಸದಸ್ಯರು ಸದನದಿಂದ ಹೊರನಡೆದರು.ಪ್ರತಿಪಕ್ಷದ ತೀವ್ರ ಘೋಷಣೆಗಳ ನಡುವೆಯೂ ಮಸೂದೆಯನ್ನು ಧ್ವನಿಮತದ ಮೂಲಕ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಚರ್ಚೆ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಗುಂಡಿನ ದಾಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಣೆ ಎಂದು ಆರೋಪಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಮಸೂದೆ ಕುರಿತು ಚರ್ಚೆ ನಡೆಯುವ ವೇಳೆ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಪೊಲೀಸ್ ಕ್ರಮವನ್ನು ಪ್ರಶ್ನಿಸಿ, ಅದರ ಬಗ್ಗೆ ಅಮಿತ್ ಶಾ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು. ಆಡಳಿತ ಪಕ್ಷ ಈ ಆರೋಪಗಳನ್ನು ತಳ್ಳಿಹಾಕಿ, ಸರ್ಕಾರ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದಲೇ ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕಾನೂನು ತರಲಾಗಿದೆ ಎಂದು ಹೇಳಿತು. ಗದ್ದಲದ ನಡುವೆಯೇ ಸ್ಪೀಕರ್ ಮಸೂದೆಯನ್ನು ಧ್ವನಿಮತಕ್ಕೆ ಹಾಕಿದ್ದು, ಅದು ಅಂಗೀಕಾರವಾಯಿತು.








