ಸಮಗ್ರ ನ್ಯೂಸ್: ‘ವಂದೇ ಮಾತರಂ’ ರಾಷ್ಟ್ರಗೀತೆಗೆ ಗೌರವ ಸೂಚಿಸದೆ ಅಪಮಾನಿಸುವುದನ್ನು ಅಪರಾಧವೆಂದು ಪರಿಗಣಿಸುವ ಮಹತ್ವದ ‘ರಾಷ್ಟ್ರೀಯ ಗೌರವಕ್ಕಾಗುವ ಅಪಮಾನ ತಡೆ (ತಿದ್ದುಪಡಿ) ಮಸೂದೆ – 2026’ ಅನ್ನು ಬುಧವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು.
ಸಂಸತ್ತಿನ ಕಾರ್ಯಕಲಾಪಗಳ ಪಟ್ಟಿಯಲ್ಲಿದ್ದಂತೆ ಪರಿಶೀಲನೆ ಮತ್ತು ಅಂಗೀಕಾರಕ್ಕಾಗಿ ಈ ಮಸೂದೆಯನ್ನು ಮೇಲ್ಮನೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗಿತ್ತು. ಈ ಮಹತ್ವದ ಮಸೂದೆಯ ಚರ್ಚೆಯ ವೇಳೆಯೂ ಪ್ರತಿಪಕ್ಷಗಳ ನಾಯಕರು ತೀವ್ರ ಪ್ರತಿಭಟನೆ ಹಾಗೂ ಘೋಷಣೆಗಳನ್ನು ಕೂಗಿದರು. ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದ ‘ನೀಟ್’ ಪರೀಕ್ಷಾ ಅಕ್ರಮದ ವಿರುದ್ಧದ ವಿದ್ಯಾರ್ಥಿ ಪ್ರತಿಭಟನೆಯ ಮೇಲೆ ಪೊಲೀಸರು ನಡೆಸಿದರೆನ್ನಲಾದ ಬಲಪ್ರಯೋಗಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಉತ್ತರ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದವು.
ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷ ನಾಯಕರು, ಮಸೂದೆಯ ಮೇಲಿನ ಚರ್ಚೆ ನಡೆಯುತ್ತಿರುವಾಗಲೇ ಕಲಾಪವನ್ನು ಬಹಿಷ್ಕರಿಸಿ ಸಭಾತ್ಯಾಗ (Walkout) ನಡೆಸಿದರು. ವಿಪಕ್ಷಗಳ ಅನುಪಸ್ಥಿತಿ ಹಾಗೂ ಗದ್ದಲದ ನಡುವೆಯೇ ಮೇಲ್ಮನೆಯಲ್ಲಿ ಈ ತಿದ್ದುಪಡಿ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.








