ಸಮಗ್ರ ನ್ಯೂಸ್: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಶಿಕ್ಷಣ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸೋಮವಾರ ಆಯೋಜಿಸಿದ್ದ ‘ಸಂಸದ್ ಚಲೋ’ ಪ್ರತಿಭಟನೆಯು ಆರಂಭದಲ್ಲಿ ಶಾಂತಿಯುತವಾಗಿ ನಡೆದರೂ, ನಂತರದಲ್ಲಿ ಹಿಂಸಾಚಾರಕ್ಕೆ ತಿರುಗಿತು.
ಕೆಲವು ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಕೆಲವು ಪ್ರತಿಭಟನಾಕಾರರಿಗೂ ಗಾಯಗಳಾಗಿವೆ. ಘರ್ಷಣೆ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಅನುಮತಿ ನಿರಾಕರಿಸಿದ್ದರೂ ಅದನ್ನು ಲೆಕ್ಕಿಸದೇ ಸೋಮವಾರ ಬೆಳಗ್ಗೆ ಜಂತರ್ ಮಂತರ್‌ನಿಂದ ಸಂಸತ್ ಭವನದವರೆಗೆ ವಿದ್ಯಾರ್ಥಿಗಳು, ಯುವಜನರು ರ್‍ಯಾಲಿ ಆರಂಭಿಸಿದ್ದಾರೆ. ಇದನ್ನು ಮೊದಲೇ ಊಹಿಸಿದ್ದ ಪೊಲೀಸರು ಜಂತರ್‌ಮಂತರ್‌ನಲ್ಲೇ ಪ್ರತಿಭಟನಾಕಾರರ ಮೇಲೆ ಲಾಠಿಪ್ರಹಾರ ನಡೆಸಿ ಅವರನ್ನು ಚದುರಿಸಿದ್ದಾರೆ. ಆದರೆ, ಸುಮಾರು 50,000ದಷ್ಟು ಪ್ರತಿಭಟನಾಕಾರರು ಬೇರೆ ಬೇರೆ ಮಾರ್ಗಗಳ ಮೂಲಕ, ಗುಂಪು ಗುಂಪಾಗಿ ಸಂಸತ್ ಭವನದತ್ತ ಹೆಜ್ಜೆ ಹಾಕಿದ್ದಾರೆ. ಕೊನೆಗೆ ಸಂಸತ್ ಭವನ ತಲುಪುವ ಮುನ್ನವೇ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದು, ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆಯುಂಟಾಗಿದೆ. ಸಂಸತ್ ಭವನದಿಂದ 3 ಕಿ.ಮೀ ದೂರದಲ್ಲಿರುವ ಶಾಸ್ತ್ರೀ ಭವನದವರೆಗೂ ಪ್ರತಿಭಟನಾಕಾರರು ಮುಂದುವರಿಯಲಷ್ಟೇ ಸಾಧ್ಯವಾಯಿತು.
ಕೆಲವು ವಿದ್ಯಾರ್ಥಿಗಳು ಮುಂದೆ ಸಾಗಲಾಗದೇ ರಸ್ತೆಯಲ್ಲೇ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು, ಲಾಠಿ ಪ್ರಯೋಗಿಸಿದ್ದಾರೆ. ಈ ವೇಳೆ ಕೆಲವರು ಕಲ್ಲುತೂರಿದ್ದಾರೆ ಎನ್ನಲಾಗಿದ್ದು, ಹಲವು ಪೊಲೀಸ್ ವಾಹನಗಳಿಗೂ ಹಾನಿ ಮಾಡಲಾಗಿದೆ. ಜನ್‌ಪಥ್ ರಸ್ತೆಯಲ್ಲಿನ ಕೆಲವು ಅಂಗಡಿಗಳಿಗೂ ಹಾನಿಯಾಗಿರುವ ವರದಿಯಾಗಿದೆ. ಸಂಸತ್ ಚಲೋ ಹಿನ್ನೆಲೆಯಲ್ಲಿ 5500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇದರಲ್ಲಿ ಅರೆಸೇನಾ ತುಕಡಿಗಳು ಕೂಡ ಇದ್ದವು.
ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಸಿಜೆಪಿ ವಕ್ತಾರರೊಂದಿಗೆ ಸಭೆ ನಡೆಸಿದ ಕೇಂದ್ರ ಸಚಿವ ಜೆ.ಪಿ.ನಡ್ಡಾ, ಅವರ ಬೇಡಿಕೆಗಳನ್ನು ಆಲಿಸಿದರು. ಸಿಜೆಪಿ ವಕ್ತಾರ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ನಡ್ಡಾ ಅವರಿಗೆ ತಮ್ಮ ಬೇಡಿಕೆ ಪತ್ರ ಸಲ್ಲಿಸಿದರು. ಸರ್ಕಾರದೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ನಡ್ಡಾ ಸಿಜೆಪಿಗೆ ಭರವಸೆ ನೀಡಿದರು. ಅದಾಗ್ಯೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಜೆಪಿ ಸೋಮವಾರ ಸಂಜೆ ಹೇಳಿದೆ. ಇತ್ತ ಕಳೆದ 23 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್, ಬೇಡಿಕೆ ಈಡೇರುವವರೆಗೂ ತಮ್ಮ ನಿರಶನ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ದಿಲ್ಲಿಯ ರಾಜೀವ್ ಚೌಕ್, ಜನಪಥ, ಪಟೇಲ್ ಚೌಕ್, ಕೇಂದ್ರೀಯ ಸಚಿವಾಲಯ ಮತ್ತು ಸೇವಾ ತೀರ್ಥ ಮೆಟ್ರೋ ಸ್ಟೇಷನ್‌ಗಳನ್ನು ಬಂದ್ ಮಾಡಲಾಗಿತ್ತು. ಪರಿಣಾಮ ನೂರಾರು ಪ್ರಯಾಣಿಕರು ತೊಂದೆರಯನ್ನು ಅನುಭವಿಸಬೇಕಾಯಿತು. ಕೆಲವು ಪ್ರತಿಭಟನಾಕಾರರು ಗೇಟ್‌ಗಳನ್ನು ಜಿಗಿದು ಹೊರಬಂದರು.
ಈ ಮಧ್ಯೆ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಸಫ್ದರ್‌ಗಂಜ್ ಹಾಸ್ಪಿಟಲ್‌ನಲ್ಲಿರುವ ಕಾರ್ಯಕರ್ತ ಸೋನಂ ವಾಂಗ್ಚುಕ್ ಮನವಿ ಮಾಡಿದರು. ಆದರೆ, ಆಸ್ಪತ್ರೆಯ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಈ ಮಧ್ಯೆ, ಉಪವಾಸ ಆರಂಭಿಸಿದ್ದ ಸಿಜೆಪಿ ಸ್ಥಾಪಕ ದೀಪ್ಕೆ ತಮ್ಮ ಸತ್ಯಾಗ್ರಹವನ್ನು ಕೈಬಿಟ್ಟರು.
ಚಲೋ ಸಂಸತ್ ಮೆರವಣಿಗೆ ವೇಳೆ ಪೊಲೀಸ್ ಬ್ಯಾರಿಕೇಡ್‌ಗಳನ್ನು ಬೇಧಿಸಿದ ಪ್ರತಿಭಟನಾಕಾರರು, ಲಾಠಿ ಪ್ರಹಾರ, ಅಶ್ರುವಾಯು ಹೊರತಾಗಿಯೂ, ‘ಜಿರಳೆಗಳಂತೆ ಮರಳಿ ಬರುವೆವು’ ಎನ್ನುತ್ತಾ ಹಿಮ್ಮೆಟ್ಟಲು ನಿರಾಕರಿಸಿದರು ಹಾಗೂ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
‘ನಮ್ಮನ್ನು ತಡೆಯಲು ಹಲವು ಬಾರಿ ಯತ್ನಿಸಿದ್ದಾರೆ. ಮಾರ್ಗದುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಲಾಠಿ ಪ್ರಹಾರ, ಅಶ್ರುವಾಯು ಎದುರಿಸಿದ್ದೇವೆ. ಆದರೆ ನಾವು ಹಿಂತಿರುಗುವ ಪ್ರಶ್ನೆಯೇ ಇಲ್ಲ’ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದರು.
ಪ್ರತಿಭಟನೆ ಹೊರತಾಗಿಯೂ ಬೇಡಿಕೆಗಳನ್ನು ಸರ್ಕಾರ ಆಲಿಸಲೇ ಇಲ್ಲವೆಂದು ನೊಂದ ವಿದ್ಯಾರ್ಥಿಗಳು, ‘ತನ್ನ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸದ ದೇಶವು ಸರ್ವನಾಶವಾಗುವುದು ಖಚಿತ’ ಎಂದು ಶಪಿಸಿದರು. ಪ್ರತಿಭಟನೆಯನ್ನು ಈ ಹಂತದಲ್ಲಿ ಸೋತು ಕೈಬಿಟ್ಟರೆ, ಸರ್ಕಾರದ ಕೈ ಮೇಲಾಗಬಹುದು ಎಂದರು.
ಇನ್ನು, ‘ಪ್ರತಿಭಟನೆಗೆ ಹೋಗುವೆ ಎಂದರೆ ಆತಂಕಗೊಳ್ಳುತ್ತಾರೆ ಎಂಬ ಕಾರಣಕ್ಕೆ ಮನೆಯವರಿಗೆ ತಿಳಿಸದೇ ಆಗಮಿಸಿರುವೆ’ ಎಂದು ಬಿಹಾರದ ಮಹಿಳೆಯೊಬ್ಬರು ತಿಳಿಸಿದರು. ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ, ಹರ್ಯಾಣ ಸೇರಿ ಹಲವು ರಾಜ್ಯಗಳ ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇನ್ನು ಎಲ್‌ಜಿಬಿಟಿಕ್ಯೂ ಸಮುದಾಯದಿಂದ ಭಾಗವಹಿಸುವವರಿಗೆ ಪ್ರತ್ಯೇಕ ಸಂಪರ್ಕ ಜಾಲಗಳನ್ನು ಒದಗಿಸಲಾಗಿತ್ತು ಎಂದು ವರದಿಯಾಗಿದೆ.
ಪ್ರತಿಭಟನೆಯ ಸಂದರ್ಭದಲ್ಲಿ, ಮಧ್ಯ ದೆಹಲಿ ಸೇರಿ ದೆಹಲಿಯ ಹಲವೆಡೆ ಅಂತರ್ಜಾಲ ಸ್ಥಗಿತಗೊಳಿಸಲಾಗಿತ್ತು. ಪ್ರತಿಭಟನೆಯ ಕ್ಷಣಕ್ಷಣದ ಮಾಹಿತಿ ಜನರನ್ನು ತಲುಪದಂತೆ ತಡೆಯಲು ಈ ಕುತಂತ್ರ ರೂಪಿಸಲಾಗಿದೆ ಎಂದು ಸಿಜೆಪಿ ಆರೋಪಿಸಿದೆ. ‘ನೀವು ಇಂಟರ್ನೆಟ್ ಸ್ಥಗಿತಗೊಳಿಸಬಹುದು, ಆದರೆ ದೆಹಲಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕಣ್ಣಾರೆ ಕಂಡು ಜಗತ್ತಿಗೆ ವರದಿ ಮಾಡುವ ಪ್ರತಿಭಟನಾಕಾರರ ಕಣ್ಣು ಮತ್ತು ಕಿವಿಗಳನ್ನು ನೀವು ಹೇಗೆ ಮುಚ್ಚುತ್ತೀರಿ?’ ಎಂದೂ ಪ್ರಶ್ನಿಸಿದೆ.








