ನರಿಮೊಗರು ಘಟನೆಗೆ ಬಿಜೆಪಿಯಿಂದ ಕೋಮುಬಣ್ಣ ಯತ್ನ – ಅಶೋಕ್ ಕುಮಾರ್

ಸಮಗ್ರ ನ್ಯೂಸ್: “ಪುತ್ತೂರಿನ ನರಿಮೊಗರಿನಲ್ಲಿ ನಡೆದ ಸಣ್ಣ ಮಿಸ್‌ಅಂಡರ್‌ಸ್ಟ್ಯಾಂಡಿಂಗ್ ಘಟನೆಯನ್ನು ಇಟ್ಟುಕೊಂಡು ರಾಜಕೀಯ ವಲಯದಲ್ಲಿ ಅದಕ್ಕೆ ಕೋಮು ಬಣ್ಣ ಹಚ್ಚುವ ಕೆಲಸ ನಡೆಯುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೆಣಗಳ ಮೇಲೆ ರಾಜಕೀಯ ಮಾಡುವುದೇ ಬಿಜೆಪಿಯವರ ಮುಖ್ಯ ಉದ್ದೇಶವಾಗಿದೆ” ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Ad Widget ... .. Ad Widget .

ಬೆಂಗಳೂರಿನಿಂದ ಮರಳಿದ ತಕ್ಷಣ ನರಿಮೊಗರು ಘಟನೆಯ ಬಗ್ಗೆ ಶನಿವಾರ ಬೆಳಿಗ್ಗೆ ದೂರು ಮತ್ತು ಪ್ರತಿ ದೂರು ನೀಡಿರುವ ಎರಡೂ ಕುಟುಂಬಗಳ ಮನೆಗೆ ಖುದ್ದಾಗಿ ಭೇಟಿ ನೀಡಿ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಘಟನೆಯ ಅಸಲಿ ಹಿನ್ನೆಲೆಯನ್ನು ವಿವರಿಸಿದ ಶಾಸಕರು, “ಇವತ್ತು ಬೆಳಿಗ್ಗೆ ನಾನು ಹುಡುಗಿ ಹಾಗೂ ಹುಡುಗನ ಇಬ್ಬರ ಮನೆಗೂ ಭೇಟಿ ನೀಡಿದ್ದೆ. ಹುಡುಗಿ ಕಡೆಯವರು ಹೇಳುವ ಪ್ರಕಾರ, ಬೆಳಿಗ್ಗೆ 6.30 ರ ಸಮಯದಲ್ಲಿ ಆಕೆ ಕೆಲಸಕ್ಕೆ ಹೋಗುತ್ತಿದ್ದಾಗ ಹುಡುಗನೊಬ್ಬ ಚೂರಿ ಹಿಡಿದುಕೊಂಡು ರಸ್ತೆ ದಾಟುತ್ತಿದ್ದನ್ನು ನೋಡಿ ಗಾಬರಿಗೊಂಡಿದ್ದಾಳೆ. ಆದರೆ ಹುಡುಗನ ಕಡೆಯವರನ್ನು ವಿಚಾರಿಸಿದಾಗ, ಅವರು ಪ್ರತಿ ನಿತ್ಯ ಬೆಳಿಗ್ಗೆ ಜಿಮ್‌ಗೆ ಹೋಗುವ ಹವ್ಯಾಸ ಹೊಂದಿದ್ದು, ಅಂದು ಬ್ರೆಡ್ ತಿನ್ನಲು ತಂದಿದ್ದರು.

Ad Widget

ಆ ಬ್ರೆಡ್‌ಗೆ ಸವರಲು ತಂದಿದ್ದ ಜಾಮ್ ಬಾಟಲ್ ಮುಚ್ಚಳ ಓಪನ್ ಮಾಡಲು ಬಾರದೇ ಇದ್ದಾಗ, ಪಕ್ಕದ ಅಂಗಡಿಯವರಿಂದ ಚೂರಿ ಪಡೆದು ಅದನ್ನು ಓಪನ್ ಮಾಡಿದ್ದರು. ಆ ಚೂರಿಯನ್ನು ವಾಪಸ್ ಅಂಗಡಿಯವನಿಗೆ ಕೊಡಲು ಹೋಗುತ್ತಿದ್ದಾಗ ಕೋಇನ್ಸಿಡೆಂಟ್ ಆಗಿ ಆ ಹುಡುಗಿ ಅಲ್ಲಿಂದ ಹಾದು ಹೋಗಿದ್ದಾಳೆ. ಅಲ್ಲಿ ಯಾವುದೇ ಜಗಳವಾಗಲಿ, ಮಾತುಕತೆಯಾಗಲಿ ನಡೆದಿಲ್ಲ. ಇದು ಕೇವಲ ಮಿಸ್‌ಅಂಡರ್‌ಸ್ಟ್ಯಾಂಡಿಂಗ್ ಎಂದು ಅಂಗಡಿಯವರೂ ಸ್ಪಷ್ಟಪಡಿಸಿದ್ದಾರೆ” ಎಂದು ತಿಳಿಸಿದರು.

ಠಾಣೆಯಲ್ಲಿ ಕೇಸ್ ದಾಖಲಿಸಲು ತಡಮಾಡಲಾಯಿತು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕರು, “ಈ ಪ್ರಕರಣವನ್ನು ದಕ್ಷಿಣ ಕನ್ನಡ ಎಸ್ಪಿ ಅವರೇ ಖುದ್ದಾಗಿ ಹ್ಯಾಂಡಲ್ ಮಾಡಿದ್ದಾರೆ. ವಿಡಿಯೋ ಫುಟೇಜ್ ಸೇರಿದಂತೆ ಎಲ್ಲ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಸತ್ಯಾಸತ್ಯತೆ ನೋಡಿ ಎರಡು ಕಡೆಯಿಂದಲೂ ದೂರನ್ನು ಸ್ವೀಕರಿಸಿದ್ದಾರೆ. ಪುತ್ತೂರಿನಲ್ಲಿ ಶಾಂತಿ ಕದಡಲು ಮತ್ತು ದಕ್ಷಿಣ ಕನ್ನಡ ಎಸ್ಪಿ ಹಾಗೂ ಕಮಿಷನರ್ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿಸುವುದೇ ವಿರೋಧ ಪಕ್ಷಗಳ ಏಕೈಕ ಟಾರ್ಗೆಟ್ ಆಗಿದೆ. ಕಳೆದ ಮೂರು ವರ್ಷಗಳಿಂದ ಇಲ್ಲಿ ಯಾವುದೇ ಕೋಮು ಸಂಘರ್ಷಗಳಾಗಿಲ್ಲ, ಯಾರ ಜೀವವೂ ಹೋಗಿಲ್ಲ.

ಇದನ್ನು ಸಹಿಸದ ನಾಯಕರು ಧರ್ಮದ ಹೆಸರಿನಲ್ಲಿ ಬಡವರ ಮಕ್ಕಳನ್ನು ಜೈಲಿಗೆ ಕಳುಹಿಸುವ ಸಂಚು ರೂಪಿಸುತ್ತಿದ್ದಾರೆ” ಎಂದು ಕಿಡಿಕಾರಿದರು. ಈ ಪ್ರಕರಣದಲ್ಲಿ ನಾನು ಯಾವುದೇ ಪೊಲೀಸ್ ಅಧಿಕಾರಿಗೆ ಫೋನ್ ಮಾಡಿಲ್ಲ, ಯಾರಿಗೂ ಕುಮ್ಮಕ್ಕು ಕೊಟ್ಟಿಲ್ಲ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಸಾಕ್ಷಿಯಾಗಿ ನಾನು ಆಣೆ ಮಾಡಿ ಹೇಳುತ್ತೇನೆ, ನಾನೇನಾದರೂ ತಪ್ಪು ಮಾಡಿದ್ದರೆ ದೇವರು ನನಗೆ ಶಿಕ್ಷೆ ನೀಡಲಿ. ಧರ್ಮ ಮತ್ತು ಹೆಣದ ಮೇಲೆ ರಾಜಕೀಯ ಮಾಡುವವರನ್ನು ಯುವಕರು ತಿರಸ್ಕರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

Leave a Comment

Your email address will not be published. Required fields are marked *