‘ಇಂದಿರಾ ಕಿಟ್’ ಸಿಗೋದು ಡೌಟ್| 10ಕೆಜಿ ಅಕ್ಕಿ ಮುಂದುವರಿಕೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಅನ್ನಭಾಗ್ಯ’ ಯೋಜನೆಯಡಿ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ಬದಲಿಗೆ ತೊಗರಿಬೇಳೆ, ಅಡುಗೆ ಎಣ್ಣೆ ಒಳಗೊಂಡ ‘ಇಂದಿರಾ ಕಿಟ್’ ನೀಡುವ ಪ್ರಸ್ತಾವನೆಯನ್ನು ಕೈಬಿಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

Ad Widget ... .. Ad Widget .

ಜಟಿಲ ಷರತ್ತುಗಳಿಂದಾಗಿ ಕಳೆದ 8 ತಿಂಗಳಿಂದ ಟೆಂಡರ್ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವುದು ಹಾಗೂ ಮಾಸಿಕ 550 ಕೋಟಿ ರೂ.ಗಳ ಹೆಚ್ಚುವರಿ ಬಜೆಟ್ ಹೊಂದಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಇಂದಿರಾ ಕಿಟ್ ಯೋಜನೆಯನ್ನು ಕೈಬಿಟ್ಟು, ಈ ಹಿಂದೆ ನೀಡುತ್ತಿದ್ದ ಮಾಸಿಕ 10 ಕೆ.ಜಿ ಅಕ್ಕಿ ವಿತರಣೆಯನ್ನೇ ಮುಂದುವರಿಸಲು ಆಹಾರ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.

Ad Widget

ಇಂದಿರಾ ಕಿಟ್‌ ವಿತರಣೆಗೆ ಸಂಬಂಧಿಸಿದಂತೆ ಈ ಹಿಂದೆ ಆಹಾರ ಇಲಾಖೆಯು ಒಮ್ಮೆ ಟೆಂಡರ್‌ ಕರೆದಿತ್ತು. ಈ ಪ್ರಕ್ರಿಯೆಯಲ್ಲಿ ಸುಮಾರು 20 ಪ್ರಮುಖ ಸಂಸ್ಥೆಗಳು ಭಾಗವಹಿಸಿದ್ದವು. ಆದರೆ, ಇಲಾಖೆಯು ತಮಗೆ ಬೇಕಾದ ನಿರ್ದಿಷ್ಟ ಸಂಸ್ಥೆಗೆ ಟೆಂಡರ್‌ ನೀಡಲು ಒಳಗೊಳಗೆ ನಿರ್ಧರಿಸಿತ್ತು ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೇಸರಗೊಂಡ ಕೆಲವು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿದ್ದರಿಂದ ಟೆಂಡರ್‌ ಪ್ರಕ್ರಿಯೆ ಅರ್ಧಕ್ಕೇ ಸ್ಥಗಿತಗೊಂಡಿತು. ಮತ್ತೊಂದೆಡೆ, ಅಧಿಕಾರಿಗಳು ವಿಧಿಸಿದ್ದ ಜಟಿಲ ಷರತ್ತುಗಳಿಂದಾಗಿ ಯಾವುದೇ ಸಂಸ್ಥೆಯೂ ಅಂತಿಮವಾಗಿ ಆಯ್ಕೆಯಾಗಲಿಲ್ಲ. ಬಳಿಕ ಷರತ್ತು ಸಡಿಲಿಸಿ ಮರು ಟೆಂಡರ್ ಕರೆಯುವ ಮಾತುಗಳು ಕೇಳಿಬಂದಿದ್ದರೂ, ಸದ್ಯಕ್ಕೆ ಇಡೀ ಯೋಜನೆಯನ್ನೇ ಕೈಬಿಡುವ ಮುನ್ಸೂಚನೆ ದಟ್ಟವಾಗಿದೆ.

ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬದಲ್ಲಿ ಸುಮಾರು 4 ರಿಂದ 5 ಸದಸ್ಯರಿದ್ದರೆ, ಸದ್ಯದ ನಿಯಮದಂತೆ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ.ಯಂತೆ ಒಟ್ಟು 40 ರಿಂದ 50 ಕೆ.ಜಿ. ಅಕ್ಕಿ ಜಮೆಯಾಗುತ್ತದೆ. ಆರಂಭದಲ್ಲಿ ಕೇಂದ್ರದ ಪಾಲಿನ ಹೊರತಾಗಿ ತನ್ನ ಪಾಲಿನ ಹೆಚ್ಚುವರಿ ಅಕ್ಕಿಯನ್ನು ಖರೀದಿಸಲು ರಾಜ್ಯ ಸರ್ಕಾರ ನಾನಾ ರಾಜ್ಯಗಳತ್ತ ಧಾವಿಸಿದರೂ ಸಫಲತೆ ಸಿಗಲಿಲ್ಲ. ಹೀಗಾಗಿ, 2023ರ ಜುಲೈ 10ರಿಂದ 2025ರ ಜನವರಿವರೆಗೆ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ (DBT) ಮುಖೇನ ಹಣ ಜಮೆ ಮಾಡಲಾಗುತ್ತಿತ್ತು. ಆದರೆ, ಇದು ಇಲಾಖೆಗೆ ಆರ್ಥಿಕ ಹೊರೆಯಾಗುತ್ತದೆ ಎಂದು ಭಾವಿಸಿ, ಹಣದ ಬದಲಿಗೆ ಇತರೆ ಅಗತ್ಯ ಸಾಮಗ್ರಿಗಳನ್ನು ನೀಡುವುದೇ ಸೂಕ್ತ ಎಂದು ಸರ್ಕಾರ ತೀರ್ಮಾನಿಸಿತ್ತು.

ಹಣದ ಬದಲಿಗೆ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿ ನೀಡಿ, ಇನ್ನುಳಿದ 5 ಕೆ.ಜಿ. ಅಕ್ಕಿಯ ಬದಲಾಗಿ ತೊಗರಿಬೇಳೆ, ಅಡುಗೆ ಎಣ್ಣೆ, ಉಪ್ಪು ಮತ್ತು ಸಕ್ಕರೆ ಒಳಗೊಂಡ ‘ಇಂದಿರಾ ಕಿಟ್‌’ ವಿತರಿಸಲು ನಿರ್ಧರಿಸಿತ್ತು. 2025ರ ಜನವರಿಯಲ್ಲೇ ಈ ಕಿಟ್ ವಿತರಿಸುವುದಾಗಿ ಇಲಾಖೆ ಪ್ರಕಟಿಸಿತ್ತಾದರೂ, ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಅವಧಿ ಮುಂದೂಡಲ್ಪಡುತ್ತಲೇ ಬಂದಿತ್ತು.

ಪ್ರಸ್ತುತ ಎಫ್‌ಸಿಐನಿಂದ (FCI) ಅಕ್ಕಿ ಖರೀದಿಸಲು ಆಹಾರ ಇಲಾಖೆಯು ಪ್ರತಿ ತಿಂಗಳು ಸುಮಾರು 480 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ. ಇಲಾಖೆಯು ಕೇವಲ 500 ಕೋಟಿ ರೂ. ವೆಚ್ಚದಲ್ಲಿ ಪೌಷ್ಟಿಕಾಂಶ ಭರಿತ ಆಹಾರ ಕಿಟ್‌ಗಳನ್ನು ವಿತರಿಸಬಹುದು ಎಂದು ಲೆಕ್ಕಾಚಾರ ಹಾಕಿತ್ತಾದರೂ, ಪ್ರಾಯೋಗಿಕ ಜಾರಿ ಕಷ್ಟಸಾಧ್ಯವಾಗಿದೆ. ಹೀಗಾಗಿ, ಗೊಂದಲ ಹಾಗೂ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಪ್ಪಿಸಲು ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿಯನ್ನೇ ನೇರವಾಗಿ ವಿತರಿಸುವುದು ಎಲ್ಲ ದೃಷ್ಟಿಯಿಂದಲೂ ಉತ್ತಮ ಎಂಬ ಅಂತಿಮ ತೀರ್ಮಾನಕ್ಕೆ ಆಹಾರ ಇಲಾಖೆ ಬಂದಿದೆ ಎನ್ನಲಾಗಿದೆ.

Leave a Comment

Your email address will not be published. Required fields are marked *