ಸಮಗ್ರ ನ್ಯೂಸ್: ಕರ್ನಾಟಕದ ಪಶ್ಚಿಮ ಘಟ್ಟಗಳ ಭಾಗ, ಕರಾವಳಿ, ಹಲವು ಒಳನಾಡು ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಮುಂಗಾರು ಮಳೆ ಇದೀಗ ತಗ್ಗಿದೆ. ರಾಜ್ಯಾದ್ಯಂತ ದುರ್ಬಲಗೊಂಡಿದ್ದು, ಕರಾವಳಿ ಹಾಗೂ ಮಲೆನಾಡು ಸೇರಿ ಕೇವಲ 7 ಜಿಲ್ಲೆಗಳಲ್ಲಿ ಮಾತ್ರವೇ ಭಾರೀ ಮಳೆ ನಿರೀಕ್ಷೆ ಇದೆ. ಉಳಿದಂತೆ ಒಣಹವೆ ಮುಂದುವರಿಯುವ ಸಾಧ್ಯತೆಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ರಾಜ್ಯದ ಪ್ರಾದೇಶಿಕ ಕೇಂದ್ರ ಮುನ್ಸೂಚನೆ ನೀಡಿದೆ.
ಕಳೆದ ಎರಡು ವಾರಗಳಿಂದ ಸಾಧಾರಣದಿಂದ ಭಾರೀ, ಅತೀ ಭಾರೀ ಮಳೆ ಕಂಡಿದ್ದ ರಾಜ್ಯದ ವಿವಿಧ ಪ್ರದೇಶಗಳು ಜುಲೈ 11ರಿಂದ ಮತ್ತೆ ತೀವ್ರ ಬಿಸಿಲಿನ ಶಾಖ ಎದರಿಸಬಹುದು. ಕರಾವಳಿ, ಮಲೆನಾಡು ಬಿಟ್ಟರೆ ರಾಜ್ಯಾದ್ಯಂತ ಗುರುವಾರದಿಂದಲೇ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು ಕಂಡು ಬಂದಿದೆ. ಮಳೆ ಸಂಪೂರ್ಣ ಕಣ್ಮರೆಯಾಗಿದ್ದು, ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಜೂನ್ ಮೊದಲ ಮತ್ತು ಎರಡನೇ ವಾರ ನಿರೀಕ್ಷಿಸಿದ್ದ ಮಳೆ ಜುಲೈನಲ್ಲಿ ಆಗಿದೆ. ಇದೀಗ ಬಂದ ಮಳೆ ಸಾಕಾಗಿಲ್ಲ. ಮತ್ತೆ ಬಿಸಿಲು ಬಿದ್ದರೆ ಬೆಳೆ ಒಣಗುತ್ತವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದಿನ 48 ಗಂಟೆಗಳಲ್ಲಿ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ (65 ಮಿಲಿ ಮೀಟರ್ -115 ಮಿಲಿ ಮೀಟರ್) ಮಳೆ ನಿರೀಕ್ಷೆ ಇದ್ದು, ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ಭಾಗದಲ್ಲಿ ಗಾಳಿಯ ಬೀಸುವಿಕೆ ಪ್ರತಿ ಗಂಟೆಗೆ 30-40 ಕಿಲೋ ಮೀಟರ್ ಇರಲಿದೆ.
ಅದೇ ರೀತಿ ಮಲೆನಾಡಿನ ಭಾಗದ ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದು ಶುಕ್ರವಾರ (ಜುಲೈ 10) ರಂದು ಒಂದು ದಿನ ಭರ್ಜರಿ ಮಳೆ ನಿರೀಕ್ಷೆ ಇದೆ. 115 ರಿಂದ 200 ಮಿಲಿ ಮೀಟರ್‍ವರೆಗೆ ಧಾರಾಕಾರ ಮಳೆ ಆಗಲಿದ್ದು, ಆರೆಂಜ್ ಅಲರ್ಟ್ ಕೊಡಲಾಗಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಸಮುದ್ರ ಹಾಗೂ ಭೂಮೇಲ್ಮೈ ಮಟ್ಟದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದು ನೈಋತ್ಯ ಉತ್ತರಪ್ರದೇಶ ಮತ್ತು ನೆರೆಹೊರೆ ಪ್ರದೇಶದ ಮೇಲೆ ಕೇಂದ್ರೀಕೃತವಾಗಿದೆ. ಸಂಬಂಧಿತ ಚಂಡಮಾರುತದ ಪರಿಚಲನೆಯು ಈಗ ಸರಾಸರಿ ಸಮುದ್ರ ಮಟ್ಟದಿಂದ 7.6 ಕಿಮೀ ವರೆಗೆ ವಿಸ್ತರಿಸಿದೆ. ಇದು ನಿಧಾನವಾಗಿ ಈಶಾನ್ಯಕ್ಕೆ ಚಲಿಸಲಿದೆ. ಈ ಕಾರಣದಿಂದ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಮುಂಗಾರು ಚುರುಕಾಗಿದೆ. ಕರ್ನಾಟಕ ಸೇರಿ ದಕ್ಷಿಣ ಭಾಗದ ರಾಜ್ಯಗಳಲ್ಲಿ ಮುಂಗಾರು ದುರ್ಬಲಗೊಂಡಿದೆ.
ಗುರುವಾರ ರಾಜ್ಯದ ಅನೇಕ ಭಾಗಗಳಲ್ಲಿ ಮಳೆ ದಾಖಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ಚಿಕ್ಕಮಗಳೂರು, ಮಂಗಳೂರು, ಕೊಡಗು, ಶಿವಮೊಗ್ಗ, ಬಾಳೆಹೊನ್ನೂರು, ಶಿರಸಿ, ಆಗುಂಬೆ, ಹಾಸನ ಭಾಗದಲ್ಲಿ ಉತ್ತಮ ಮಳೆ ಆಗಿದೆ. ಧಾರವಾಡ, ಹಿರಿಯೂರು, ಚಿಂತಾಮಣಿ, ರಾಯಚೂರಿನಲ್ಲಿ ಹಗುರ ಮಳೆ ದಾಖಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಮಳೆ ತಗ್ಗಿದ್ದು ಮತ್ತೆ ಬರದ ಭೀತಿ ಆವರಿಸಿದೆ.








